


ಲಕ್ಕೋ, ಸೆ. 14: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದಲ್ಲಿ ಚಿನ್ನ ಕಳವು ಆರೋಪ ಕೇಳಿ ಬಂದಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾದ ಕೆಲವು ದಿನಗಳ ಬಳಿಕ ಈ ಆರೋಪ ಕೇಳಿ ಬಂದಿದೆ.
ವಾರಣಾಸಿ ಮೂಲದ ವಕೀಲ ಹಾಗೂ ಬಾರ್ ಅಸೋಸಿಯೇಶನ್ನ ಮಾಜಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ರಾಯ್ ಅವರು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ದೇವಾಲಯದ ‘ಶಿಖರ’ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿನ್ನ ಕಾಣೆಯಾಗಿವೆ. ಇದನ್ನು ಮುಚ್ಚಿಡಲು ದೇವಾಲಯದ ಆಡಳಿತ ಮಂಡಳಿ ಆ ಸ್ಥಳಗಳಿಗೆ ಬಣ್ಣ ಬಳಿದಿದೆ ಎಂದು ಆರೋಪಿಸಿದ್ದಾರೆ.
ವಾರಣಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್, ಇದಕ್ಕೆ ಸಂಬಂಧಿಸಿ ತನ್ನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಕೋರಿ ಕಳೆದ ತಿಂಗಳು ವಾರಣಾಸಿಯ ಆಯುಕ್ತರು, ಜಿಲ್ಲಾಧಿಕಾರಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಮುಖ್ಯ ಮಂತ್ರಿ ಕಚೇರಿಗೆ ಪತ್ರಗಳನ್ನು ಬರೆದಿದ್ದೆ. ಆದರೆ, ಪ್ರಧಾನ ಮಂತ್ರಿ ಕಚೇರಿಯನ್ನು ಹೊರತುಪಡಿಸಿ ಬೇರೆ ಯಾರೂ ಪ್ರತಿಕ್ರಿಯಿಸಿಲ್ಲ ಎಂದಿದ್ದಾರೆ.
ದೇವಾಲಯದ ಉತ್ತರದ ಬಾಗಿಲಿನ ಮೇಲಿರುವ ಎರಡು ಸ್ಥಳಗಳಲ್ಲಿದ್ದ ಸ್ಪರ್ಣ ಕಳಶ ಕಾಣೆಯಾಗಿದೆ. ಇದು ಗಂಭೀರ ವಿಷಯವಾಗಿದ್ದು, ಸಮಗ್ರ ತನಿಖೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ದೇವಾಲಯದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಎಲ್ಲಿ ಬಳಸಲಾಗಿದೆ ಎಂಬ ವಿವರಗಳನ್ನೊಳಗೊಂಡ ಶ್ವೇತ ಪತ್ರವನ್ನು ದೇವಾಲಯದ ಆಡಳಿತ ಮಂಡಳಿ ಹೊರಡಿಸಬೇಕು. ಈ ವಿವರಗಳನ್ನು ದೇವಾಲಯದ ವೆಬೈಟ್ನಲ್ಲೂ ಹಂಚಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದರೆ, ದೇವಾಲಯಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಆರೋಪಗಳು ‘ತಪ್ಪು’ ಮತ್ತು ‘ಆಧಾರ ರಹಿತ’ ಎಂದು ಹೇಳಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ ಆಲಿಕಲ್ಲು ಮಳೆ ಬಿದ್ದ ಸಂದರ್ಭ ದೇವಾಲಯದ ಪ್ರವೇಶದ್ವಾರದ ಮೇಲಿರುವ ಗುಮ್ಮಟದ ಒಂದು ಭಾಗ ಕುಸಿದು ಬಿದ್ದಿತು. ಅದನ್ನು ದೇವಾಲಯದ ಆಡಳಿತ ಮಂಡಳಿ ಸುರಕ್ಷಿತವಾಗಿ ವಶದಲ್ಲಿರಿಸಿದೆ ಎಂದು ವಾರಣಾಸಿ ವಿಭಾಗೀಯ ಅಧಿಕಾರಿ ಎಸ್. ರಾಜಲಿಂಗಮ್ ತಿಳಿಸಿದ್ದಾರೆ.








