


ನಾವೂರು : ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಸ್ವಾತಿ ಕಟ್ಟಡದ ಆರೋಗ್ಯ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ನಾವೂರು ನಿವಾಸಿ ರವಿ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನಿಬ್ಬರು ಶಂಕಿತರಾದ ನಾವೂರು ನಿವಾಸಿ ಸುರೇಶ್ ಇಂಚರ ಮತ್ತು ಪುತ್ತೂರಿನ ಕೌಡಿಚಾರು ಎಂಬಲ್ಲಿನ ನಾವೂರು ನಿವಾಸಿ ದಿನೇಶ್ ಪ್ರಭು ಎಂಬವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅ.6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕುವ ಪ್ರಯತ್ನ ಮಾಡಿದ್ದರು. ಈ ಕೃತ್ಯದಿಂದ ಔಷಧಿಗಳು, ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟು ಸುಮಾರು 2 ರಿಂದ 3 ಲಕ್ಷ ರೂ. ನಷ್ಟ ಉಂಟಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ BNS ಕಲಂ 326, 324ರಡಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ಹಿಂದೆ ಇರುವವರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಿಗೆ ದೂರು ನೀಡಲಾಗಿತ್ತು. “ಈ ಕೃತ್ಯ ಯಾಕೆ ನಡೆದಿದೆ ಎಂದು ತನಿಖೆಯಾಗಬೇಕು. ನಾವೂರು ಗ್ರಾಮದಲ್ಲಿ ಈ ರೀತಿ ಘಟನೆಗಳು ಪದೇ ಪದೇ ನಡೆಯುತ್ತಿದೆ. ನಾವೂರು ಗ್ರಾಮವನ್ನು ಶಾಂತಿ ಗ್ರಾಮವನ್ನಾಗಿ ಮಾಡುವಲ್ಲಿ ಡಾ. ಪ್ರದೀಪ್ ಅವರ ಪಾತ್ರ ದೊಡ್ಡದು ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಡಾ. ಪ್ರದೀಪ್ ಅವರ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಕೃತ್ಯವನ್ನು ಶಾಸಕ ಹರೀಶ್ ಪೂಂಜ, ಜನಪ್ರತಿನಿಧಿಗಳು, ವೈದ್ಯರು, ಉದ್ಯಮಿಗಳು ಸೇರಿದಂತೆ ನಾಗರಿಕರು ಖಂಡಿಸಿದ್ದರು. ನಾವೂರು ಗ್ರಾಮಸ್ಥರು ಖಂಡನಾ ಸಭೆ ನಡೆಸಿದ್ದರು.
ಡಾ. ಪ್ರದೀಪ್ ಅವರ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಘಟನೆ ನಡೆದು 7 ದಿನಗಳು ಕಳೆದಿದ್ದರೂ ಆರೋಪಿಗಳ ಬಂಧನವಾಗಿಲ್ಲ ಎಂದು ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಬೆಳ್ತಂಗಡಿ ಪ್ರಖಂಡದವರು ಅ.13ರಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು. ತನಿಖೆಯಲ್ಲಿ ಪ್ರಗತಿ ಕಾಣದಿದ್ದರೆ ದುರ್ಗಾ ವಾಹಿನಿ ಮತ್ತು ಮಾತೃ ಮಂಡಳಿ ಸಹಯೋಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಒಂದು ವಾರದೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ, ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ, ಪಿಎಸ್ಐಗಳಾದ ಆನಂದ್ ಹಾಗೂ ಸಿಕಂದರ್ ಪಾಷಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಸೋಕೋ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








