ವಿಟ್ಲ: ಮಕ್ಕಳಿಗೆ ಮನೆಯಲ್ಲಿಯೇ ಸಂಪ್ರದಾಯ, ಆಚರಣೆ ಮತ್ತು ಸಂಸ್ಕಾರಗಳನ್ನು ಕಲಿಸುವ ಅಗತ್ಯವಿದೆ. ಮಕ್ಕಳು ತಪ್ಪು ಮಾಡಿದಾಗಲೇ ಅವರನ್ನು ತಿದ್ದಿ, ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಜ್ಞಾನ, ಅರಿವು, ನಂಬಿಕೆ ಮತ್ತು ವಿಶ್ವಾಸವಿದ್ದಲ್ಲಿ ದೇವರನ್ನು ಕಾಣಬಹುದು ಎಂದು ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಹೇಳಿದರು.

ಕನ್ಯಾನ ಗ್ರಾಮದ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಮಂಚಿ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವಾ ಕಾರ್ಯಗಳು ನಡೆಯುತ್ತಿವೆ. ಜಗತ್ತು ಎಐ ತಂತ್ರಜ್ಞಾನದ ಮೂಲಕ ಮುಂದುವರಿಯುತ್ತಿದ್ದರೂ, ವ್ಯಕ್ತಿತ್ವದ ಅಧಃಪತನವಾಗುತ್ತಿರುವುದು ಖೇದಕರ. ಯುವಜನತೆಯ ಮನೋಸ್ಥೈರ್ಯ ಕುಸಿಯುತ್ತಿದ್ದು, ಇದರಿಂದ ಹೊರಬಂದು ದೃಢಚಿತ್ತದಿಂದ ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಉದ್ಯಮಿ ಸೂರ್ಯನಾಥ ಆಳ್ವ ಮಿತ್ತಳಿಕೆ, ಪಿಂಗಾರ ತೋಟಗಾರಿಕಾ ಸಂಸ್ಥೆಯ ನಿರ್ದೇಶಕಿ ಸಾಯಿಗೀತಾ ವಿ. ಹೆಗ್ಡೆ ಹಾಗೂ ವಿಟ್ಲ ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಚಂದ್ರಹಾಸ ಸುವರ್ಣ ಭಾಗವಹಿಸಿದ್ದರು.








