Tuesday, October 20, 2026
spot_imgspot_img
spot_imgspot_img

ಕಾಶ್ಮೀರದ ಕಾಡಲ್ಲಿ ಉಗ್ರರ ಅಡಗುತಾಣ ಪತ್ತೆ – ಗುಹೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ

- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದ ಗುಹೆಯಲ್ಲಿದ್ದ ಉಗ್ರರ ಅಡಗುತಾಣವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದು, ಅಲ್ಲಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಡಗುತಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು, ಅರಣ್ಯ ಪ್ರದೇಶವನ್ನು ಸುತ್ತುವರಿದು ಕೂಲಂಕಷವಾಗಿ ಶೋಧ ನಡೆಸಿದೆ. ಈ ವೇಳೆ ಕೋತ್ರಾಂಕಾ ತಹಸಿಲ್‌ನ ಪಂಚ್ ಗಬ್ಬಾರ್ ಪ್ರದೇಶದ ‘ಚೋರ್ ಹಿಲ್’ ಬಳಿ ಅಡಗುತಾಣ ಪತ್ತೆಯಾಗಿದ್ದು, ಗುಹೆಯಲ್ಲಿ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್‌ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು ಎಕೆ-47 ರೈಫಲ್‌ಗೆ ಬಳಸುವ 18 ಸುತ್ತು ಗುಂಡುಗಳು ಪತ್ತೆಯಾಗಿವೆ.

ಈ ಶಸ್ತ್ರಾಸ್ತ್ರಗಳನ್ನು ಸಮಯೋಚಿತವಾಗಿ ವಶಪಡಿಸಿಕೊಂಡಿರುವುದರಿಂದ, ಈ ಪ್ರದೇಶದಲ್ಲಿ ಉಗ್ರರು ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಗಳನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಉಗ್ರರು ಆಗಾಗ ನೈಸರ್ಗಿಕ ಗುಹೆಗಳನ್ನು ಅಡಗುತಾಣಗಳಾಗಿ ಬಳಸಿಕೊಳ್ಳುತ್ತಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!