



ಮಂಗಳೂರು: ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಇಬ್ಬರು ಯುವಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಪಿಕಪ್ ಚಾಲಕ ಹಫೀಝ್ ಅಲಿಯಾಸ್ ಅಪ್ಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಅ.19ರಂದು ಜುನೈದ್ ಮತ್ತು ಅರ್ಫಾಝ್ ಹಾಗೂ ಪಿಕಪ್ ಚಾಲಕ ಹಫೀಝ್ ನಡುವೆ ಮೊಬೈಲ್ ವಿಚಾರವಾಗಿ ಮಾತಿನ ಚಕಮಕಿ ನಡೆದು, ಬಳಿಕ ಹೊಡೆದಾಟ ನಡೆದಿತ್ತು ಎನ್ನಲಾಗಿದೆ. ನಂತರ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳುತ್ತಿದ್ದ ಇಬ್ಬರನ್ನು ಹಫೀಝ್ ಪಿಕಪ್ ವಾಹನದಲ್ಲಿ ಹಿಂಬಾಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಳಿಯಾರಿನ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ಗೆ ಹಿಂದಿನಿಂದ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿತ್ತು. ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.ಘಟನೆಯ ಬಳಿಕ ಪಿಕಪ್ ವಾಹನವನ್ನು ರಸ್ತೆ ಬದಿಯಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ. ಈ ಸಂಬಂಧ ಇಸ್ಮಾಯಿಲ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೊಬೈಲ್ ವಿಚಾರವಾಗಿ ನಡೆದ ಜಗಳದ ಸಿಟ್ಟಿನಲ್ಲಿ ಬೊಲೇರೊ ವಾಹನದಿಂದ ಢಿಕ್ಕಿ ಹೊಡೆದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








