


ವಿಟ್ಲ: ಪುಣಚ ದೇವಿ ನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ 44 ನೇ ವರ್ಷದ ಶ್ರೀ ಶಾರದೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಸಾಣೂರು ರಾಜೇಶ್ವರಿ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ, ಭಾರತ ಜಗತ್ತಿನಲ್ಲೇ ಜ್ಞಾನ ಸಮೃದ್ಧ ದೇಶ. ದೇಶಕ್ಕಾಗಿ ಜಾಗೃತರಾಗುವ ಕಾಲ ಸನ್ನಿಹಿತವಾಗಿದೆ. ದೇಶದ ಸವಾಲುಗಳಿಗೆ ನಾವೇ ಉತ್ತರಿಸಬೇಕಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹಕಾರ್ಯವಾಹ ಹರಿಕೃಷ್ಣ ಮಾತನಾಡಿ, ಧರ್ಮ ಎಂಬುದು ಬದುಕಿನ ಕರ್ತವ್ಯದ ಭಾಗವಾಗಿದೆ. ಸರಿಯಾಗಿ ಅರ್ಥೈಸಿಕೊಂಡು ಧರ್ಮದ ಆಚರಣೆಯಾಗಬೇಕು. ಹಿರಿಯರ ಚಿಂತನೆ, ಮಾರ್ಗದರ್ಶನದಂತೆ ನಡೆಯುವ ಕಾರ್ಯಕ್ರಮಗಳು ಜೀವನ್ಮುಖಿಯಾಗಿರುತ್ತದೆ. ಯುವಪೀಳಿಗೆಗೆ ಆದರ್ಶಗಳನ್ನು ತಿಳಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಯುವ ಪೀಳಿಗೆಯಲ್ಲಿ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಸೃಜನಶೀಲತೆ ಸೃಷ್ಟಿಸಬೇಕಾಗಿದೆ. ಹಿಂದು ರಾಷ್ಟ್ರೀಯತೆಗಾಗಿ ಪ್ರತಿಯೊಬ್ಬರೂ ಸಂಕಲ್ಪಿಸಬೇಕಾಗಿದೆ ಎಂದರು. ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಬೇರಿಕೆ ಉಪಸ್ಥಿತರಿದ್ದರು.
ಗ್ರಾಮ ಗೌರವ: ಇದೇ ಸಂದರ್ಭದಲ್ಲಿ ನಡೆದ ಗ್ರಾಮ ಗೌರವ ಕಾರ್ಯಕ್ರಮದಲ್ಲಿ ಈ ಬಾರಿಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವಿದ್ಯಾಶಂಕರ್ ನಾಯಕ್ ರೆಂಬೆ ಅವರನ್ನು ಗೌರವಿಸಲಾಯಿತು. ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ 2026 ವಿನ್ನರ್ ಮಾ.ಅಶ್ಮಿತ್ ಎ.ಜೆ. ಅವರನ್ನು ಅಭಿನಂದಿಸಲಾಯಿತು.
ಶ್ರೀ ಶಾರದೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ವಿನಯ ಕುಮಾರಿ ಸ್ವಾಗತಿಸಿದರು. ಸಂಚಾಲಕ ಭರತ್ ಬುಡಲೆ ವಂದಿಸಿದರು. ಗುರುದೀಪ್ ಎನ್. ಕಾರ್ಯಕ್ರಮ ನಿರೂಪಿಸಿದರು. ಕೃತಿಕ್ ನೆಕ್ಕರೆಕಾನ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಿ ನಗರ ಯುವ ವೃಂದದ ಪ್ರಾಯೋಜಕತ್ವದಲ್ಲಿ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ ಕಂಬಳಬೆಟ್ಟು ಇವರು ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.








