


ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಭಾರೀ ಅವಘಡ ತಪ್ಪಿದ್ದು, 450 ಕೆಜಿ ತೂಕದ ಬೆಳ್ಳಿ ಅಂಬಾರಿ ಹೊತ್ತಿದ್ದ ಆನೆ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂಸವಾರಿ ಆರಂಭವಾಗಿತ್ತು. ಮೆರವಣಿಗೆ ಸ್ವಲ್ಪ ದೂರ ಸಾಗುತ್ತಿದ್ದಂತೆ, ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಓಡಲು ಆರಂಭಿಸಿದೆ.
ಆನೆಯ ಆರ್ಭಟಕ್ಕೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಜಂಬೂಸವಾರಿ ವೀಕ್ಷಿಸಲು ನೆರೆದಿದ್ದ ಜನರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಕೆಲವು ಕಾರುಗಳು ಆನೆಯ ದಾಳಿಗೆ ಜಖಂ ಆಗಿವೆ. ಆನೆ ಓಡಿದ ರಭಸಕ್ಕೆ ಅದರ ಬೆನ್ನ ಮೇಲಿದ್ದ ಬೆಳ್ಳಿ ಅಂಬಾರಿ ಜಾರಿ ಬಿದ್ದಿದ್ದು, ಅಂಬಾರಿಗೂ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಾವುತರು ಮತ್ತು ಕಾವಾಡಿಗರು ಕಬ್ಬಿಣದ ಸರಪಳಿಯಿಂದ ಆನೆಯನ್ನು ಕಟ್ಟಿ ಹಾಕಿದ್ದಾರೆ. ಈ ಘಟನೆಯ ಬಳಿಕ ಜಂಬೂಸವಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ ದಸರಾದ ಅಂಬಾರಿ ಹೊರಲು ಸಾಗರ್ ಆನೆಗೆ ತರಬೇತಿ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಗರ್ ಆನೆಗೆ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ಸೋಮಣ್ಣ ಆನೆಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿತ್ತು. ಸರಿಯಾದ ತಾಲೀಮು ಇಲ್ಲದೆ ಅಂಬಾರಿ ಹೊರಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.








