


ಮೂಡುಬಿದಿರೆ: ವಿದ್ಯುತ್ ಆಘಾತಕ್ಕೆ ಒಳಗಾಗಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿ ಎಂಬಲ್ಲಿ ಗುರುವಾರ(ಅ.22) ಬೆಳಗ್ಗೆ ನಡೆದಿದೆ.
ಮೃತರು ಮರ್ಸಿ ಮಸ್ಕರೇನಸ್(45) ಮತ್ತು ಅವರ ಪುತ್ರ ಶೋನ್ ಮಸ್ಕರೇನಸ್(18) ತಿಳಿದು ಬಂದಿದೆ.
ಮೂಡುಬಿದಿರೆ ಹೋಲಿ ರೋಸರಿ ಕಾಲೇಜು ವಿದ್ಯಾರ್ಥಿಯಾಗಿರುವ ಶೋನ್ ಮಸ್ಕರೇನಸ್ ಬಟ್ಟೆ ಒಣಗಿಸುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಆಕಸ್ಮಿಕವಾಗಿ ಹೈಟೆನ್ಸನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಶೋನ್ ಬಟ್ಟೆ ಒಣಹಾಕುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ಎನ್ನಲಾಗಿದ್ದು, ಇದನ್ನು ಕಂಡು ಅಲ್ಲೇ ಪಕ್ಕದಲ್ಲಿದ್ದ ತಾಯಿ ಮರ್ಸಿ ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರೂ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.
ಸುಮಾರು 7ರಿಂದ 8 ಗಂಟೆಯ ವೇಳೆಗೆ ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಸ್ಥಳಕ್ಕೆ ಬಂದಾಗ ಘಟನೆ ಗಮನಕ್ಕೆ ಬಂದಿದ್ದು, ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.








