
ಕಾಸರಗೋಡು: ಓಖಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಣ್ಣೂರು ಜಿಲ್ಲೆಯ ಇಬ್ಬರನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಕಣ್ಣೂರು ಜಿಲ್ಲೆಯ ಎಡಮನೆ ನಿವಾಸಿ ದೀಪು ಇ. (36) ಮತ್ತು ತಾಟಿಯೇರಿ ನಿವಾಸಿ ಪ್ರಮೋದ್ ಸಿ. (54) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 20ರಂದು ಕೊಲ್ಲೂರು ದೇವಾಸ್ಥಾನಕ್ಕೆ ತೆರಳಿ ಬೈಂದೂರು ಮೂಕಾಂಬಿಕಾ ರೈಲು ನಿಲ್ದಾಣದಿಂದ ಓಖಾ ಎಕ್ಸ್ಪ್ರೆಸ್ ರೈಲಿನಲ್ಲಿ ಯುವತಿಯೊಬ್ಬರು ಕಾಞಂಗಾಡ್ಗೆ ಪ್ರಯಾಣಿಸುತ್ತಿದ್ದರು. ರೈಲು ಕಾಞಂಗಾಡ್ ನಿಲ್ದಾಣ ತಲುಪುವ ವೇಳೆ ಅದೇ ಬೋಗಿಯಲ್ಲಿದ್ದ ಇಬ್ಬರು ಯುವತಿಗೆ ಮುಜುಗರ ಉಂಟುಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ ಎನ್ನಲಾಗಿದೆ.
ಕಾಞಂಗಾಡ್ ನಿಲ್ದಾಣದಲ್ಲಿ ರೈಲಿನಿಂದ ಇಳಿದ ಯುವತಿ, ಕರ್ತವ್ಯದಲ್ಲಿದ್ದ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿ ಸೋಜನ್ ಟಿ.ಸಿ. ಅವರಿಗೆ ದೂರು ನೀಡಿದ್ದು, ಅವರ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಕಾಸರಗೋಡು ರೈಲ್ವೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು
ಕಾಞಂಗಾಡ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.








