ಸಿಸಿಬಿ ಮುಖ್ಯಸ್ಥರು ಮತ್ತು ರಾಕೇಶ್ ಶೆಟ್ಟಿಗೆ ಒಬ್ಬರೇ ವಕೀಲರು: ವಕೀಲರ ಆಯ್ಕೆ ತೀವ್ರ ಚರ್ಚೆಗೆ ಗ್ರಾಸ



ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಲು ಸೃಷ್ಟಿಸಿದ್ದ ವಿಡಿಯೋ ಸಂಬಂಧಿಸಿದಂತೆ ಖಾಸಗಿ ವಾಹಿನಿ ಪವರ್ ಟಿವಿ ಎಂ. ಡಿ ರಾಕೇಶ್ ಶೆಟ್ಟಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಗುರುವಾರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಶುಕ್ರವಾರಕ್ಕೆ ಅದೇಶ ಕಾಯ್ದಿರಿಸಿದೆ. ವಕೀಲ ಸ್ವರೂಪ್ ಆನಂದ್ ಎಂಬುವರು ರಾಕೇಶ್ ಶೆಟ್ಟಿ ಪರವಾಗಿ ಅರ್ಜಿಯನ್ನು ಸಲ್ಲಿಸಿ ವಾದ ಮಾಡಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅ.6 ರಂದು ನಗರ ಪೊಲೀಸ್ ಆಯುಕ್ತರಿಗೆ ಸುದೀರ್ಘ 12 ಅಂಶಗಳ ದೂರನ್ನು ನೀಡಿದ್ದರು. ಇದರ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 56/2026 ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಈಗಾಗಲೇ ಎರಡು ಬಾರಿ ಪವರ್ ಟಿವಿ ಎಂ.ಡಿ ರಾಕೇಶ್ ಶೆಟ್ಟಿಯ ವಿಚಾರಣೆಯನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ನಡೆಸಿದ್ದರು. ಆದರೆ ಪ್ರಕರಣ ದಾಖಲಾಗಿ 17 ದಿನ ಕಳೆದರೂ ಪ್ರಕರಣದಲ್ಲಿ ಯಾರನ್ನೂ ಸಿಸಿಬಿ ಪೊಲೀಸರು ಬಂಧಿಸಿಲ್ಲ. ಇದರ ನಡುವೆ ರಾಕೇಶ್ ಶೆಟ್ಟಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಇನ್ನೂ ತನ್ನದೇ ಖಾಸಗಿ ವಾಹಿನಿ ಪವರ್ ಟಿವಿಯಲ್ಲಿ ‘ಅಲ್ಲೋಲ ಕಲ್ಲೋಲ’ ಎನ್ನುವ ಕಾರ್ಯಕ್ರಮ ನಡೆಸಿದ್ದ ರಾಕೇಶ್ ಶೆಟ್ಟಿ, ಅಪಾದಿತ ವಿಡೀಯೋ ಮಾಡಿದ್ದು ತಾನೇ ಎಂಬುದನ್ನು ಒಪ್ಪಿಕೊಂಡಿದ್ದರು ಅಲ್ಲದೆ ತಾನೇ ವಿಚಾರಣೆಗೆ ಹೋಗಿದ್ದಾಗಿಯೂ ಹೇಳಿದ್ದರು. ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎಂದಿದ್ದರು. ಆದರೆ ಈಗ ರಾಕೇಶ್ ಶೆಟ್ಟಿ ಯಾಕೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಪ್ರಶ್ನೆ ವ್ಯಾಪಕವಾಗಿ ಎದ್ದಿದೆ.








