

ಕಾಸರಗೋಡು: ಗೂಗಲ್ ಮ್ಯಾಪ್ ನೋಡಿ ಚಲಾಯಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಕಾಸರಗೋಡಿನ ಕುತ್ತಿಕೋಲ್ ಸಮೀಪದ ವಟ್ಟಂತಟ್ಟದಲ್ಲಿ ನಡೆದಿದೆ.
ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುತ್ತಿಕೋಲ್–ಕಾನತ್ತೂರು ರಸ್ತೆಯ ವಟ್ಟಂತಟ್ಟದ ಇಳಿಜಾರಿನಲ್ಲಿ ರಾತ್ರಿ ಸುಮಾರು 8.30ಕ್ಕೆ ಅಪಘಾತ ನಡೆದಿದೆ. ತಮಿಳುನಾಡಿನಿಂದ ಕಾಸರಗೋಡಿಗೆ ಬರುತ್ತಿದ್ದ ಲಾರಿ ಚಾಲಕನಿಗೆ ಆ ರಸ್ತೆ ಪರಿಚಯವಿಲ್ಲದ ಕಾರಣ ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಇಳಿಜಾರಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಬಳಿಕ ರಸ್ತೆ ಬದಿಯ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಲಾರಿಯ ಕ್ಯಾಬಿನ್ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಅದರೊಳಗೆ ಸಿಲುಕಿಕೊಂಡಿದ್ದನು. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.








