ನಾಗರಬಾವಿ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಪೋಷಕರ ಆರೋಪ



ಬೆಂಗಳೂರು: ಕಿವಿ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದ ಮಗು ಗುಣಮುಖವಾಗಿ ಬರದೇ ಕೋಮಾಗೆ ಹೋಗಿದೆ. ಅರ್ಧಗಂಟೆಯಲ್ಲಿ ಕಿವಿ ಹೊಲಿಗೆ ಅಂತ ಕರೆದೊಯಿದ್ದ ನಾಗರಬಾವಿಯ ಕ್ಲೌಡ್ ನೈನ್ ಆಸ್ಪತ್ರೆ ವೈದ್ಯರು ಯಡವಟ್ಟು ಮಾಡಿಕೊಂಡಿದ್ದು, ಮಗುವನ್ನು ಕೋಮಾ ಸ್ಥಿತಿಗೆ ತಂದಿಟ್ಟಿದ್ದಾರೆ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಮಾಗೆ ಹೋದ ಪುಟ್ಟ ಕಂದಮ್ಮನ ಹೆಸರು ಶಯಾನ್, ವಯಸ್ಸು 1 ವರ್ಷ 2 ತಿಂಗಳು. ಮನೆಯಲ್ಲಿ ಆಟವಾಡಬೇಕಿದ್ದ ಮಗು ಇವತ್ತು ಆಸ್ಪತ್ರೆ ಬೆಡ್ನಲ್ಲಿ ಕೋಮಾಗೆ ಜಾರಿದೆ.
ಸಣ್ಣ ಕಿವಿ ಗಾಯ ಅಂತ ಆಸ್ಪತ್ರೆಗೆ ಬಂದ ಮಗುವನ್ನು ಕೋಮಾ ಸ್ಥಿತಿಗೆ ತಲುಪುವಂತೆ ಮಾಡಿದ್ದಾರೆ ಎಂದು ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 3 ತಿಂಗಳಿನಿಂದ ಪುಟ್ಟ ಕಂದಮ್ಮ ಕೋಮಾಗೆ ಜಾರಿದ್ದು, ಆಸ್ಪತ್ರೆಯಲ್ಲಿ ಪೋಷಕರ ಗೋಳಾಟ ಹೇಳತೀರದಾಗಿದೆ.
ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅನಸ್ತೇಶಿಯಾ ಓವರ್ ಡೋಸ್ನಿಂದ ಮಗು ಕೋಮಾಗೆ ಹೋಗಿದೆ. ತಜ್ಞರಿಲ್ಲದೇ ಅನಸ್ತೇಶಿಯಾ ಕೊಟ್ಟಿದ್ದಾರೆ ಎಂದು ಆರೋಪಿಸ್ತಿದ್ದಾರೆ. ಅಲ್ಲದೇ 3 ತಿಂಗಳಿಂದಲೂ ಪೋಷಕರು ಆಸ್ಪತ್ರೆಯಲ್ಲೇ ದಿನಕಳೆಯುತ್ತಿದ್ದಾರೆ. ಆಸ್ಪತ್ರೆಗೆ ಆಟ ಆಡಿಕೊಂಡು ಬಂದ ಮಗುವನ್ನ ಕೋಮಾಗೆ ಕಳಿಸಿದ್ದಾರೆ. ನನ್ನ ಮಗುವನ್ನ ಮೊದಲಿನಂತೆ ಕಳಿಸಿ ಎಂದು ಪೋಷಕರು ಗೋಳಾಡಿದ್ದಾರೆ
ಆಸ್ಪತ್ರೆ ಎದುರು ಮಗುವಿನ ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ನಮ್ಮ ಮಗುವಿನ ಎಡ ಭಾಗದ ಕಿವಿಗೆ ವಾರ್ಡ್ರೋಬ್ನ ಎಡ್ಜ್ ತಗುಲಿ ಗಾಯವಾಗಿತ್ತು. ರಕ್ತ ಬರುತ್ತಿತ್ತು ಎಂದು ಆಸ್ಪತ್ರೆಗೆ ಕರೆತಂದ್ವಿ. ಇಲ್ಲಿ ಮಕ್ಕಳ ತಜ್ಞರು ಚೆನ್ನಾಗಿದ್ದಾರೆ ಎಂದು ಕರೆತಂದ್ವಿ. ಆದರೆ ಈವಾಗ ಹೀಗಾಗಿದೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಕೋಮಾಗೆ ಜಾರಿರುವ ಮಗು ಶಯಾನ್ ಪೋಷಕರಿಂದ ಕೆಎಂಸಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದೆ. ದೂರು ಬೆನ್ನಲ್ಲೇ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿದೆ. ಭೇಟಿ ವೇಳೆ ಮೇಲ್ನೋಟಕ್ಕೆ ವೈದ್ಯರ ಲೋಪ ಪತ್ತೆಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ ಮಾಡಲಾಗಿದ್ದು, ಆಸ್ಪತ್ರೆಯಲ್ಲೇ ಮಗುವಿಗೆ ಉಚಿತ ಚಿಕಿತ್ಸೆ ನೀಡುವಂತೆ ಡಿಎಚ್ಒ ಸೂಚಿಸಿದ್ದಾರೆ.
ಇನ್ನು ಮಗುವಿಗೆ ಅನಸ್ತೇಶಿಯಾ ನೀಡಿದ ಡಾ.ಚರಣ್ ನಾಪತ್ತೆ ಆಗಿದ್ದಾರೆ. ಡಾ.ಚರಣ್ ನಮ್ಮ ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲ ಅಂತ ಕ್ಲಸ್ಟರ್ ಶ್ರೀನಾಥ್ ಹೇಳ್ತಿದ್ದು. ಡಾ. ಚರಣ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಅಲ್ಲದೇ ಮಗುವಿನ ಆರೋಗ್ಯ ಸ್ಥಿತಿ ಏನು ಅನ್ನೋದನ್ನೂ ತಿಳಿಸುತ್ತಿಲ್ಲ. ಮಗುವಿನ ಪೋಷಕರನ್ನು ವಾಷ್ ರೂಂಗೆ ಹೋಗಲೂ ಬಿಡದೇ ಬಾಗಿಲು ಹಾಕಿ ಕಿರುಕುಳ ಕೊಡಲಾಗ್ತಿದೆ ಎಂದು ಆರೋಪಿಸಲಾಗ್ತಿದೆ. ಎಸಿ ಆಫ್ ಮಾಡಿದ್ದಾರೆ. ಕುಡಿಯಲು ನೀರನ್ನೂ ನೀಡುತ್ತಿಲ್ಲ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.








