


ಕಾರವಾರ: ಬೋಟಿನಲ್ಲಿ ಕೊಳೆತ ಚಮನ್ ಮೀನಿನ ವಿಷ ಗಾಳಿ ಸೇವಿಸಿ ಇಬ್ಬರು ಮೀನುಗಾರರು ಸಾವನ್ನಪ್ಪಿ, ಮೂವರು ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ನಡೆದಿದೆ.
ಮೃತರು ಒರಿಸ್ಸಾ ಮೂಲದ ಪುರಂಧರ್ ಬಿಸರ(21), ಆಕಾಶ್ ನಾಯ್ಕ(24) ಎಂದು ಗುರುತಿಸಲಾಗಿದೆ. ಲಾಲಿಂದರ್ ದೃವ(41) ಗಂಭೀರ ಸ್ಥಿತಿಯಲ್ಲಿದ್ದು, ರಾಬುಲ್ ಎಂಬ ಕಾರ್ಮಿಕ ಹಾಗೂ ಇನ್ನೋರ್ವ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮುಂಜಾನೆ ಮಲ್ಪೆ ಮೂಲದ ಕೃಷ್ಣ ಎಂಬವರಿಗೆ ಸೇರಿದ ಬೋಟ್ ಮೀನನ್ನು ಅನ್ಲೋಡ್ ಮಾಡಲು ಮುದಗಾ ಬಂದರಿಗೆ ಬಂದಿದೆ.
ಈ ವೇಳೆ ಮೀನುಗಳನ್ನು ಬಂದರಿನಲ್ಲಿ ಇಳಿಸಿ ಐದು ಜನ ಕಾರ್ಮಿಕರು ಬೋಟಿನ ಒಳಗೆ ಸ್ವಚ್ಛ ಮಾಡಲು ತೆರಳಿದ್ದ ವೇಳೆ ಚಮನ್ ಮೀನಿನ ವಿಷಗಾಳಿ ಸೇವಿಸಿ ಐವರು ಕಾರ್ಮಿಕರು ಕುಸಿದು ಬಿದ್ದರು. ತಕ್ಷಣ ಮೂರು ಜನರನ್ನು ರಕ್ಷಿಸಿದರೂ ಇಬ್ಬರು ಬೋಟಿನಲ್ಲಿಯೇ ಸಾವು ಕಂಡಿದ್ದಾರೆ.
ಎನ್ಡಿಆರ್ಎಫ್ ತಂಡದಿಂದ ಮಲ್ಟಿ ಡಿಟೆಕ್ಟರ್ನಿಂದ ವಿಷ ಅನಿಲ ಸಾಂದ್ರತೆ ತಪಾಸಣೆ ನಡೆಸಿದ್ದು, ಬೋಟ್ನಲ್ಲಿ 100% ಹೈಡ್ರೋಜನ್ ಸಲ್ಫೇಟ್ ವಿಷ ಅನಿಲ ಇರುವುದನ್ನು ಎನ್ಡಿಆರ್ಎಫ್ ತಂಡ ಪತ್ತೆ ಮಾಡಿದೆ.
ಸ್ಥಳದಲ್ಲಿ ಎನ್ಡಿಆರ್ಎಫ್ನ 30 ಜನರಿರುವ ತಂಡ ಮೊಕ್ಕಾಂ ಹೂಡಿದ್ದು, ಪೊಲೀಸರು ಬೋಟನ್ನು ಬಂದರಿನಲ್ಲಿ ಪ್ರತ್ಯೇಕಿಸಿ ಇಟ್ಟಿದ್ದಾರೆ. ವಿಷಗಾಳಿಯನ್ನು ನ್ಯೂಟ್ರಲ್ಗೆ ತರಲು ಎನ್ಡಿಆರ್ಎಫ್ ತಂಡದಿಂದ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.








