Saturday, October 31, 2026
spot_imgspot_img
spot_imgspot_img

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ಯಾಂಕ್‌ಗಳೇ ಹೊಣೆಗಾರರು: ಸಂತ್ರಸ್ತರಿಗೆ ಹಣ ವಾಪಸ್ ನೀಡಬೇಕು ಎಂದ ಸುಪ್ರೀಂ ಕೋರ್ಟ್

- Advertisement -
- Advertisement -

ನವದೆಹಲಿ: ಡಿಜಿಟಲ್ ವಂಚನೆಗೆ ಒಳಗಾಗುವ ಸಂತ್ರಸ್ತರ ನಷ್ಟಕ್ಕೆ ಬ್ಯಾಂಕ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಗ್ರಾಹಕರನ್ನು ಇಂತಹ ಅಪರಾಧಗಳಿಂದ ರಕ್ಷಿಸುವುದು ಹಣಕಾಸು ಸಂಸ್ಥೆಗಳ ಮೂಲಭೂತ ಜವಾಬ್ದಾರಿಯಾಗಿದೆ. ಬ್ಯಾಂಕ್‌ಗಳ ಕಡೆಯಿಂದ ಅಗತ್ಯ ಮುನ್ನೆಚ್ಚರಿಕೆ ಅಥವಾ ನಿರ್ಲಕ್ಷ್ಯ ತನಿಖೆಯಲ್ಲಿ ಸಾಬೀತಾದರೆ, ‘ಡಿಜಿಟಲ್ ಅರೆಸ್ಟ್’ ನಂತಹ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಅವರ ಕಳೆದುಕೊಂಡ ಹಣವನ್ನು ಬ್ಯಾಂಕ್‌ಗಳೇ ಪರಿಹಾರವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಡಿಜಿಟಲ್ ಅರೆಸ್ಟ್ ಹಗರಣಗಳ ಮೂಲಕ ನಡೆಯುತ್ತಿರುವ ವ್ಯಾಪಕ ಹಣಕಾಸು ವಂಚನೆಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ನೇತೃತ್ವದ ಪೀಠವು, “ಸಂತ್ರಸ್ತರನ್ನು ರಕ್ಷಿಸುವುದು ಬ್ಯಾಂಕರ್‌ಗಳಾಗಿ ನಿಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರ ಏನು ಮಾಡುತ್ತಿದೆ?” ಎಂದು ಪ್ರಶ್ನಿಸಿದರು.

“ದೊಡ್ಡ ಕಂಪನಿಗಳ ವಹಿವಾಟುಗಳನ್ನು ತಡೆಯಲು ನಿಮಗೆ ಸಾಧ್ಯವಾಗದೇ ಇರಬಹುದು, ಆದರೆ ಸಾಮಾನ್ಯವಾಗಿ 10,000 ಅಥವಾ 20,000 ರೂ. ಹಿಂತೆಗೆದುಕೊಳ್ಳುವ ವ್ಯಕ್ತಿ ಇದ್ದಕ್ಕಿದ್ದಂತೆ 50,000 ರೂ. ಹಿಂಪಡೆದಾಗ ಅಥವಾ ವರ್ಗಾಯಿಸಿದಾಗ ಆ ವಹಿವಾಟನ್ನು ಅನುಮಾನಾಸ್ಪದ ಎಂದು ಗುರುತಿಸಿ ತಡೆಯಬೇಕಲ್ಲವೇ?” ಎಂದು ಸಿಜೆಐ ಕೇಳಿದರು.

ಹಣಕಾಸು ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಕಂಡುಬಂದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಒದಗಿಸುವ ನಿಯಂತ್ರಣ ಚೌಕಟ್ಟನ್ನು ರೂಪಿಸಬೇಕು ಎಂದು ಪೀಠ ಒತ್ತಾಯಿಸಿತು.

“ಇಂತಹ ವಂಚನೆಗಳು ಎಲ್ಲಿ ಸಂಭವಿಸುತ್ತವೆಯೋ ಅಲ್ಲಿ ಬ್ಯಾಂಕ್‌ಗಳೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕು ಎಂದು ನಿರ್ದೇಶಿಸಲು ನಾವು ಉದ್ದೇಶಿಸಿದ್ದೇವೆ. ಇದನ್ನು ಮಾಡಲೇಬೇಕಾಗಿದೆ. ಇಂತಹ ವಂಚನೆಗಳಿಗೆ ತುತ್ತಾಗುವ ಗ್ರಾಹಕರಿಗೆ ಬ್ಯಾಂಕ್‌ಗಳು ರಕ್ಷಕರಾಗಿ ಕೆಲಸ ಮಾಡಬೇಕು” ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ಇದೇ ವೇಳೆ, ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು. ವಿದ್ಯಾವಂತ ನಾಗರಿಕರೂ ಸಹ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದನ್ನು ಕಂಡು ಮುಖ್ಯ ನ್ಯಾಯಮೂರ್ತಿಗಳು ಆಶ್ಚರ್ಯ ವ್ಯಕ್ತಪಡಿಸಿದರು.

“ಡಿಜಿಟಲ್ ಅರೆಸ್ಟ್‌ಗೆ ಜನ ಏತಕ್ಕಾಗಿ ಹೆದರುತ್ತಿದ್ದಾರೆ? ಭಯದ ಮನಸ್ಥಿತಿಯಲ್ಲಿ ಏನೋ ದೋಷವಿದೆ. ಜನರು ಹೀಗೆ ಹೇಗೆ ಸಿಲುಕಿಕೊಳ್ಳುತ್ತಿದ್ದಾರೆ? ಮೊಬೈಲ್‌ನಲ್ಲಿ ಯಾರೋ ಒಬ್ಬರು ನೀವು ಅರೆಸ್ಟ್ ಆಗಿದ್ದೀರಿ ಎಂದು ಹೇಳಿದರೆ, ನೀವು ಬಂಧನಕ್ಕೊಳಗಾಗಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಾ? ಇಂತಹ ದೇಶದಲ್ಲಿ ನೀವು ಹೇಗೆ ಸಂತ್ರಸ್ತರಾಗುತ್ತಿದ್ದೀರಿ? ಈ ವಯಸ್ಸಿನಲ್ಲೇ ನೀವು ಹೀಗೆ ವಂಚನೆಗೆ ಒಳಗಾದರೆ ಮುಂದಿನ ಪೀಳಿಗೆಗೆ ನೀವು ಏನು ಸಂದೇಶ ನೀಡುತ್ತೀರಿ?” ಎಂದು ಸಿಜೆಐ ಪ್ರಶ್ನಿಸಿದರು.

ಮುಂದಿನ ವಿಚಾರಣೆಯ ದಿನಾಂಕದೊಳಗೆ ಎಲ್ಲಾ ಅಧಿಕೃತ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (ಆರ್‌ಬಿಐ) ನಿರ್ದೇಶಿಸಿದೆ. ಪ್ರತ್ಯೇಕ ಬ್ಯಾಂಕ್‌ಗಳನ್ನು ಪ್ರಕರಣದಲ್ಲಿ ಭಾಗಿಯಾಗಿಸದೆ, ಎಲ್ಲಾ ಹಣಕಾಸು ಸಂಸ್ಥೆಗಳಿಗೂ ಅನ್ವಯಿಸುವಂತೆ ಸಮಗ್ರ ನಿರ್ದೇಶನಗಳನ್ನು ನೀಡುವುದಾಗಿ ಪೀಠ ತಿಳಿಸಿದೆ.

ಪ್ರಸ್ತಾವಿತ ಮಾರ್ಗಸೂಚಿಗಳ ವ್ಯಾಪ್ತಿಗೆ ಬರುವ ಹಣಕಾಸು ಸಂಸ್ಥೆಗಳ ವಿವರಗಳು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಪರಿಗಣಿಸಲಾಗುತ್ತಿರುವ ಕ್ರಮಗಳ ಮಾಹಿತಿಯನ್ನೂ ನ್ಯಾಯಾಲಯ ಕೋರಿದೆ. ಅಲ್ಲದೆ, ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗುವ ಅಪಾಯದಲ್ಲಿರುವ ಗ್ರಾಹಕರ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಮತ್ತು ಇತರ ಪ್ರಾಧಿಕಾರಗಳ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, “ಕಳೆದ ವರ್ಷಕ್ಕೆ ಹೋಲಿಸಿದರೆ ವರದಿಯಾದ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸುಮಾರು 50% ನಷ್ಟು ಕಡಿಮೆಯಾಗಿವೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಸಂಘಟಿತ ಕ್ರಮಗಳು ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳಿಂದಾಗಿ ಈ ಇಳಿಕೆ ಸಾಧ್ಯವಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದಾಗ್ಯೂ, “ಈ ವರ್ಷವೂ ದೇಶವು ಇಂತಹ ಅಪರಾಧಗಳಿಂದ ಸುಮಾರು 800 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ. ಬ್ಯಾಂಕ್‌ಗಳ ಹೊಣೆಗಾರಿಕೆ ಮತ್ತು ಸೈಬರ್ ಅಪರಾಧದ ಹಣವನ್ನು ಸ್ವೀಕರಿಸಲು/ವರ್ಗಾಯಿಸಲು ಬಳಸಲಾಗುವ ‘ಮ್ಯೂಲ್ ಖಾತೆಗಳ’ ಸಮಸ್ಯೆ – ಈ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚಿನ ಹಸ್ತಕ್ಷೇಪದ ಅಗತ್ಯವಿದೆ” ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ಹಣಕಾಸು ಸಂಸ್ಥೆಗಳು ತಮ್ಮ ಕರ್ತವ್ಯದಲ್ಲಿ ವಿಫಲವಾದಾಗ ಸಂತ್ರಸ್ತರಿಗೆ ಪರಿಹಾರ ನೀಡುವ ನಿಬಂಧನೆಗಳನ್ನು ಮೌಲ್ಯಮಾಪನ ಮಾಡಲು ಆರ್‌ಬಿಐ ಪ್ರಸ್ತಾಪಿಸಿರುವ ‘ಕೆವೈಸಿ ತಿದ್ದುಪಡಿ ನಿರ್ದೇಶನಗಳು 2026’ (KYC Amendment Directions, 2026) ಅನ್ನು ಪರಿಶೀಲಿಸುವುದಾಗಿ ಪೀಠ ತಿಳಿಸಿದೆ.

- Advertisement -

Related news

error: Content is protected !!