


ಯಾದಗಿರಿ: ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಹಾಗೂ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದೆ.ಇಬ್ರಾಹಿಂಪುರ ಗ್ರಾಮದ ಬಳಿಯ ಡಿಬಿಎಲ್ ಕ್ಯಾಂಪ್ ಸಮೀಪ ಸೂರತ್–ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಆರು ಪಥಗಳ ರಸ್ತೆಯಲ್ಲಿ ನ.6ರಂದು ರಾತ್ರಿ 11ರಿಂದ 11.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಕೆಎ-34 ಎನ್-6622 ನೋಂದಣಿ ಸಂಖ್ಯೆಯ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಗುರುರಾಜ್ ಸುರೇಶ ಚವ್ಹಾಣ (29) ಹಾಗೂ ಮುಂಭಾಗದ ಸೀಟಿನಲ್ಲಿದ್ದ ರೆಡ್ಡಿ ಬಾಮ್ಲಾ ರಾಠೋಡ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸೀಟಿನಲ್ಲಿದ್ದ ಗೋವಿಂದ ಸೀತ್ಯಾ ಚವ್ಹಾಣ (28) ಮತ್ತು ಕುಮಾರ ರಾಮು ರಾಠೋಡ (26) ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 1.20ರ ಸುಮಾರಿಗೆ ಇಬ್ಬರೂ ಮೃತಪಟ್ಟಿದ್ದಾರೆ.
ಮೃತ ನಾಲ್ವರೂ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಯಾದಗಿರಿ ತಾಲ್ಲೂಕಿನ ವಿವಿಧ ತಾಂಡಾಗಳ ನಿವಾಸಿಗಳಾಗಿದ್ದಾರೆ.ಕಾರು ಚಾಲಕ ಗುರುರಾಜ್ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಮೃತ ರೆಡ್ಡಿ ಅವರ ಸಹೋದರ ಮಂಗ್ಯಾ ಬಾಮ್ಲಾ ರಾಠೋಡ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.








