

ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ಪುತ್ತೂರಿನಲ್ಲಿ ನ.9ರಂದು ನಡೆದ ತಿರಂಗಾ ಜಾಥಾ ಹಾಗೂ ಪ್ರತಿಭಟನಾ ಸಭೆಗೆ ಪುತ್ತೂರು ಶಾಸಕರು ಭಾಗವಹಿಸದೆ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಪ್ರಮುಖ ಹೋರಾಟದ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ಅವರು ಪ್ರತಿಭಟನೆಯಲ್ಲಿ ಭಾಗವಹಿಸದೆ, ಖಾಸಗಿ ಡಿಜಿಟಲ್ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನ.9ರಂದು ಪುತ್ತೂರಿನಲ್ಲಿ ಇಂಡಿಯಾ ಮೈತ್ರಿಕೂಟದ ವತಿಯಿಂದ ಎಸ್ಐಆರ್ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿತ್ತು. ಕಾಂಗ್ರೆಸ್ ವರಿಷ್ಠರ ಸೂಚನೆಯಂತೆ ರಾಜ್ಯದಾದ್ಯಂತ ನಡೆಯುತ್ತಿದ್ದ ಈ ಹೋರಾಟದಲ್ಲಿ ಕ್ಷೇತ್ರದ ಶಾಸಕರಾಗಿ ಅಶೋಕ್ ರೈ ಮುಂಚೂಣಿಯಲ್ಲಿ ನಿಲ್ಲಬೇಕಿತ್ತು. ಆದರೆ, ಪ್ರತಿಭಟನಾ ಸ್ಥಳದಲ್ಲಿ ಶಾಸಕರ ಉಪಸ್ಥಿತಿ ನಿರೀಕ್ಷಿಸಿದ್ದ ಕಾರ್ಯಕರ್ತರಿಗೆ ನಿರಾಶೆ ಉಂಟಾಗಿದೆ. ಪಕ್ಷದ ಹೋರಾಟದಲ್ಲಿ ಭಾಗವಹಿಸದೆ ಖಾಸಗಿ ಕಾರ್ಯಕ್ರಮಕ್ಕೆ ಹೋಗಿರುವ ಶಾಸಕರ ಈ ನಡೆಯ ಬಗ್ಗೆ ಕಾರ್ಯಕರ್ತರಲ್ಲಿ ಪ್ರಶ್ನೆ ಮೂಡಿಸಿದೆ.
ಶಾಸಕರ ಕಚೇರಿಯ ಸಮೀಪದಲ್ಲೇ ಪ್ರತಿಭಟನಾ ಕಾರ್ಯಕ್ರಮ ನಡೆದಿದ್ದು, ಆ ಸಂದರ್ಭ ಕಚೇರಿಯಲ್ಲಿದ್ದ ಶಾಸಕರು ಸ್ಥಳಕ್ಕೆ ಆಗಮಿಸದೆ ದೂರ ಉಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಎಸ್ಐಆರ್ ವಿರುದ್ಧದ ಹೋರಾಟವು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯಂತೆ ನಡೆದಿದ್ದು, ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪಕ್ಷದಿಂದ ಗೆಲುವು ಪಡೆದ ಶಾಸಕರು ಭಾಗವಹಿಸದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಶಾಸಕರ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಆದರೆ ಈ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಲವು ಮುಖಂಡರು ಭಾಗವಹಿಸಿದ್ದರು. ಕೆಪಿಸಿಸಿ ವಕ್ತಾರರಾದ ಎಂ.ಜಿ.ಹೆಗ್ಡೆ, ಕಾವು ಹೇಮನಾಥ ಶೆಟ್ಟಿ ಮತ್ತಿತರರು ಭಾಷಣ ಮಾಡಿದ್ದರು. ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಕಾರ್ಯಕ್ರಮ ಸಂಯೋಜನೆ ನಡೆಸಿದ್ದರು. ಮುಖಂಡರಾದ ಎಂ.ಬಿ ವಿಶ್ವನಾಥ ರೈ, ಎಂ.ಎಸ್.ಮಹಮ್ಮದ್, ಮಹಮ್ಮದ್ ಬಡಗನ್ನೂರು, ಉಮಾನಾಥ ಶೆಟ್ಟಿ ಪೆರ್ನೆ ಹಾಗು ಕಾಂಗ್ರೆಸ್ನ ಹಲವು ಮುಖಂಡರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಶಾಸಕರು ಭಾಗವಹಿಸಿದ್ದರು ಹಾಗೂ ಪ್ರತಿಭಟನೆಯ ರೂಪುರೇಷೆ ಬಗ್ಗೆ ಸಲಹೆ ನೀಡಿದ್ದರು, ಅಲ್ಲಿಯೇ ಪ್ರತಿಭಟನೆಗೆ ದಿನ ನಿಗದಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.








