Wednesday, November 11, 2026
spot_imgspot_img
spot_imgspot_img

AI ಸಲಹೆ ಪಡೆದು ಶ್ರೀಮಂತನಾಗುವ ಆಸೆ: 4 ವರ್ಷದ ಬಾಲಕನನ್ನು ಕೊಂದು ಅಂಗಾಂಗ ಕತ್ತರಿಸಿದ ಯುವಕ ಬಂಧನ

- Advertisement -
- Advertisement -

ರಾಯ್‌ಪುರ: ಕೃತಕ ಬುದ್ಧಿಮತ್ತೆ (AI) ಬಳಸಿ ಅತೀ ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುವ ಮಾರ್ಗ ಹುಡುಕುತ್ತಿದ್ದ 27 ವರ್ಷದ ಯುವಕನೊಬ್ಬ ತನ್ನ ನಾಲ್ಕು ವರ್ಷದ ಸಂಬಂಧಿಯನ್ನು ಹತ್ಯೆ ಮಾಡಿ, ಆತನ ಅಂಗಾಂಗಗಳನ್ನು ಹೊರತೆಗೆದಿರುವ ಭೀಕರ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸುದೇವ್ ರಾಮ್ ಅಲಿಯಾಸ್ ಟಂಗ್ಲು (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯ್‌ಪುರದಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಜಶ್‌ಪುರ ಜಿಲ್ಲೆಯ ಅಮ್ಮುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಾರ ಹಣ ಸಂಪಾದಿಸುವ ದುರಾಸೆಯಿಂದ ಆರೋಪಿ ಅಂತರ್ಜಾಲದಲ್ಲಿ ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದ. ಮಾನವ ಅಂಗಾಂಗಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಬಹುದು ಎಂಬ ಮಾಹಿತಿ ಆತನಿಗೆ ಸಿಕ್ಕಿತ್ತು ಎನ್ನಲಾಗಿದೆ.

ಅಲ್ಲದೆ, AI ಉಪಕರಣಗಳೊಂದಿಗೆ ನಡೆಸಿದ ಸಂಭಾಷಣೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಆರೋಪಿ, ಅಂಗಾಂಗಗಳನ್ನು ಖರೀದಿಸುವ ವ್ಯಕ್ತಿಯೊಬ್ಬ AI ಮೂಲಕ ತನ್ನ ಮನೆಗೆ ಬಂದು ಅವುಗಳನ್ನು ಸಂಗ್ರಹಿಸುತ್ತಾನೆ ಎಂದು ನಂಬಿದ್ದ ಎನ್ನಲಾಗಿದೆ. ಮಾನವ ಅಂಗಾಂಗಗಳನ್ನು ಹೊರತೆಗೆಯುವ ವಿಧಾನ ತಿಳಿದುಕೊಳ್ಳಲು ಯೂಟ್ಯೂಬ್‌ನಲ್ಲಿ ಶಸ್ತ್ರಚಿಕಿತ್ಸೆಯ ವಿಡಿಯೊಗಳನ್ನೂ ವೀಕ್ಷಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 5ರಂದು ನಾಲ್ಕು ವರ್ಷದ ಜಿತೇಂದ್ರ ನಾಪತ್ತೆಯಾಗಿದ್ದ. ಬಾಲಕನ ತಂದೆ ಅಭಿಜಿತ್ ರಾಮ್ ಕೋರ್ವಾ ಕೃಷಿ ಕಾರ್ಮಿಕರಾಗಿದ್ದು, ಅಮ್ಮುವಾ ನದಿ ಅಣೆಕಟ್ಟಿನ ಸಮೀಪದ ತಾತ್ಕಾಲಿಕ ಗುಡಿಸಲಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮಗ ಕಾಣೆಯಾಗಿರುವುದರಿಂದ ಆತಂಕಗೊಂಡ ತಂದೆ ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಘಟನೆ ನಡೆದ ದಿನ ಬೆಳಗ್ಗೆ ಆರೋಪಿ ಸಂಬಂಧಿಕರೊಂದಿಗೆ ಮದ್ಯ ಸೇವಿಸಿದ್ದ. ಬಳಿಕ ಬಾಲಕನನ್ನು ವಿಹಾರಕ್ಕೆ ಕರೆದೊಯ್ಯುವ ನೆಪದಲ್ಲಿ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕೋಳಿ ಮಾಂಸ ತಯಾರಿಸಿ ಬಾಲಕನಿಗೆ ತಿನ್ನಿಸಿ, ನಂತರ ಬಲವಂತವಾಗಿ ಮದ್ಯ ಕುಡಿಸಿದ್ದ ಎನ್ನಲಾಗಿದೆ.

ಬಳಿಕ ಬಾಲಕನನ್ನು ಹತ್ಯೆಗೈದು ಆತನ ಕಣ್ಣುಗಳು, ಮೂತ್ರಪಿಂಡಗಳು ಹಾಗೂ ಶ್ವಾಸಕೋಶಗಳನ್ನು ಹೊರತೆಗೆದು ಬಕೆಟ್‌ನಲ್ಲಿ ಇರಿಸಿದ್ದಾನೆ. ನಂತರ ಮೃತದೇಹವನ್ನು ಸಮೀಪದ ಜೋಳದ ಹೊಲದಲ್ಲಿದ್ದ ಮರದ ಕೆಳಗಿನ ನೀರು ತುಂಬಿದ ಗುಂಡಿಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 8ರ ಸಂಜೆ ಗ್ರಾಮಸ್ಥರು ಬಾಲಕನ ಮೃತದೇಹವನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ವೇಳೆ ಬಾಲಕ ಕೊನೆಯದಾಗಿ ಆರೋಪಿಯೊಂದಿಗೆ ಕಾಣಿಸಿಕೊಂಡಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಧಿವಿಜ್ಞಾನ ತಜ್ಞರು ಹಾಗೂ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!