
ಹೊಸದಿಲ್ಲಿ, ನ.11: ಮ್ಯಾನ್ಮಾರ್ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕದ ಪ್ರಜೆ ಮ್ಯಾಥ್ಯ ವಾನ್ಸೆಕ್, ದಿಲ್ಲಿಯ ತಿಹಾರ್ ಜೈಲಿನಲ್ಲಿ ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿದ್ದ ವೇಳೆ ತನ್ನ ಮೇಲೆ ಪದೇಪದೇ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಕೈಬರಹದ ಅಫಿಡವಿಟ್ ಸಲ್ಲಿಸಿರುವ ಅವರು, ಜೈಲಿನಲ್ಲಿ ತನ್ನ ಎದೆಗೆ ಗುದ್ದಲಾಗಿತ್ತು. ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದರೂ ಸುಮಾರು 24 ಗಂಟೆಗಳ ಕಾಲ ಚಿಕಿತ್ಸೆ ನಿರಾಕರಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಅಫಿಡವಿಟ್ ಅನ್ನು ಅಮೆರಿಕದ ರಾಯಭಾರ ಕಚೇರಿಗೆ ಕಳುಹಿಸಿದ್ದಾಗಿ ಹೇಳಲಾಗಿದ್ದು, ಸೋಮವಾರ ಅದರ ಪ್ರತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.
ಭಾರತವು ತನ್ನನ್ನು ಹಾಗೂ ಹಲವು ಉಕ್ರೇನಿಯನ್ ಪ್ರಜೆಗಳನ್ನು ಆರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇರಿಸಿತ್ತು. ಇದು ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಭಾಗವಾಗಿದೆ ಎಂದು ವಾನ್ಸೆಕ್ ಆರೋಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಮತ್ತು ಮಾಧ್ಯಮ ಸಂದರ್ಶನಗಳ ಮೂಲಕ ಈ ಕುರಿತು ಮತ್ತಷ್ಟು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಿದ್ಧಪಡಿಸುತ್ತಿರುವ ದೋಷಾರೋಪ ಪಟ್ಟಿಯ ಅಂಶಗಳ ಬಗ್ಗೆ ಅಸಮಾಧಾನವಿದ್ದಲ್ಲಿ, ಕಸ್ಟಡಿ ಅವಧಿಯಲ್ಲಿ ನಡೆದ ದೌರ್ಜನ್ಯದ ವಿವರಗಳನ್ನು ಮಾಧ್ಯಮಗಳ ಮುಂದೆ ಹಾಗೂ ನ್ಯಾಯಾಲಯದಲ್ಲಿ ಪ್ರಸ್ತಾಪಿಸುವುದಾಗಿ ಭಾರತೀಯ ಅಧಿಕಾರಿಗಳಿಗೆ ತಿಳಿಸುವಂತೆ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಅವರು ಒತ್ತಾಯಿಸಿದ್ದಾರೆ.
ತನ್ನ ಕುಟುಂಬಕ್ಕೂ ತುರ್ತು ಸಂದೇಶ ಕಳುಹಿಸಿರುವ ವಾನ್ಸೆಕ್, ತಿಹಾರ್ ಜೈಲಿನೊಳಗೆ ಪೊಲೀಸ್ ಲಾಠಿಯಿಂದ ತನ್ನ ಎದೆ ಮತ್ತು ತೋಳುಗಳಿಗೆ ಹೊಡೆಯಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ ತಿಹಾರ್ ಜೈಲು ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಅಗತ್ಯ ಪರವಾನಗಿಗಳಿಲ್ಲದೆ ಮ್ಯಾನ್ಮಾರ್‌ಗೆ ಪ್ರಯಾಣಿಸಿ, ಅಲ್ಲಿನ ಗಡಿ ದಾಟಿದ ಆರೋಪದ ಮೇಲೆ ಎನ್‌ಐಎ ಕಳೆದ ಮಾರ್ಚ್‌ನಲ್ಲಿ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಾನ್ಸೆಕ್ ಸೇರಿದಂತೆ ಏಳು ವಿದೇಶಿ ಪ್ರಜೆಗಳನ್ನು ಬಂಧಿಸಿತ್ತು. ಬಂಧಿತರಲ್ಲಿ ವಾನ್ಸೆಕ್ ಹಾಗೂ ಆರು ಉಕ್ರೇನಿಯನ್ ಪ್ರಜೆಗಳಿದ್ದರು.
ಮ್ಯಾನ್ಮಾರ್‌ನಲ್ಲಿರುವ ಸಶಸ್ತ್ರ ಗುಂಪುಗಳೊಂದಿಗೆ ಆರೋಪಿಗಳು ಸಂಪರ್ಕ ಹೊಂದಿರಬಹುದು ಎಂದು ಎನ್‌ಐಎ ಶಂಕಿಸಿತ್ತು. ಈ ಗುಂಪುಗಳ ಪೈಕಿ ಹಲವು ಈಶಾನ್ಯ ಭಾರತದಲ್ಲಿ ನೆಲೆಗಳನ್ನು ಹೊಂದಿವೆ ಎನ್ನಲಾಗಿದೆ.
ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಎನ್‌ಐಎ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ವಲಸೆ ಮತ್ತು ವಿದೇಶಿಯರ ಕಾಯ್ದೆ-2025ರ ಸೆಕ್ಷನ್ 21 ಮತ್ತು 23ನ್ನು ಮಾತ್ರ ಉಲ್ಲೇಖಿಸಲಾಗಿತ್ತು. ಯುಎಪಿಎ ಅಡಿಯ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ಅಪೂರ್ಣವೆಂದು ಪರಿಗಣಿಸಿ ವಾನ್ಸೆಕ್‌ಗೆ ಜಾಮೀನು ಮಂಜೂರು ಮಾಡಿತ್ತು.
ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳಿದ್ದ ವಾನ್ಸೆಕ್‌ಗೆ 2027ರ ಫೆಬ್ರವರಿ 24ರವರೆಗೆ ಅಮೆರಿಕದಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ. ಈ ಆರೋಪಗಳ ಕುರಿತು ಅಮೆರಿಕದ ರಾಯಭಾರ ಕಚೇರಿಯು ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.








