

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ನವೆಂಬರ್ 12ಕ್ಕೆ ಮೂರು ವರ್ಷಗಳು ಪೂರ್ಣಗೊಂಡಿವೆ.

2023ರ ನವೆಂಬರ್ 12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್ನಲ್ಲಿ ಹಾಡಹಗಲೇ ನಡೆದಿದ್ದ ಈ ಭೀಕರ ಹತ್ಯಾಕಾಂಡ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಒಂದೇ ಕುಟುಂಬದ ನಾಲ್ವರನ್ನು ಕಳೆದುಕೊಂಡಿರುವ ಕುಟುಂಬ ಇದೀಗ ನ್ಯಾಯಾಲಯದ ಅಂತಿಮ ತೀರ್ಪಿನ ನಿರೀಕ್ಷೆಯಲ್ಲಿದೆ.ಪ್ರಕರಣದ ವಿಚಾರಣೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈಗಾಗಲೇ ಒಟ್ಟು 81 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ. ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆಯಾಗಬೇಕು ಎಂಬುದು ಮೃತರ ಕುಟುಂಬದ ಒತ್ತಾಯವಾಗಿದೆ.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ ಅವರ ಪುತ್ರಿ ಐನಾಝ್ ಮೇಲಿನ ಅತಿಯಾದ ವ್ಯಾಮೋಹವೇ ಈ ಕೃತ್ಯಕ್ಕೆ ಕಾರಣವೆಂದು ತನಿಖೆಯಲ್ಲಿ ತಿಳಿದುಬಂದಿತ್ತು. ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ ಹತ್ಯೆ ನಡೆಸಿದ್ದ ಆರೋಪಿಯಾಗಿದ್ದಾನೆ.ಯಾರಿಗೂ ಅನುಮಾನ ಬಾರದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗಿಂತ ಮೊದಲೇ ನಿಲ್ಲಿಸಿದ್ದ ಆರೋಪಿ, ಅಲ್ಲಿಂದ ಆಟೊ, ಬಸ್ ಹಾಗೂ ಬೈಕ್ ಮೂಲಕ ನೇಜಾರಿಗೆ ತಲುಪಿದ್ದನು. 2023ರ ನವೆಂಬರ್ 12ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಐನಾಝ್ ಅವರ ಮನೆಗೆ ಪ್ರವೇಶಿಸಿದ ಆತ, ಐನಾಝ್ ಸೇರಿದಂತೆ ಆಕೆಯನ್ನು ರಕ್ಷಿಸಲು ಮುಂದಾದ ತಾಯಿ ಹಸೀನಾ (48), ಅಕ್ಕ ಅಫ್ನಾನ್ (23) ಮತ್ತು ತಮ್ಮ ಆಸೀಮ್ (13) ಅವರನ್ನು ಚೂರಿಯಿಂದ ಇರಿದು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದನು.ಈ ವೇಳೆ ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ (80) ಅವರಿಗೂ ಚೂರಿಯಿಂದ ಇರಿತವಾಗಿತ್ತು. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ನವೆಂಬರ್ 14ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.
2,202 ಪುಟಗಳ ದೋಷಾರೋಪಣಾ ಪಟ್ಟಿ
ಪ್ರಕರಣದ ತನಿಖೆ ನಡೆಸಿದ ಪೊಲೀಸರು 2024ರ ಫೆಬ್ರವರಿ 12ರಂದು ಮೊದಲ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಳಿಕ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಒಟ್ಟು 15 ಸಂಪುಟಗಳಲ್ಲಿ 2,202 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ತನಿಖೆಯ ವೇಳೆ 244 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು.ಪ್ರಕರಣದ ನ್ಯಾಯಾಲಯದ ವಿಚಾರಣೆ ಮುಂದುವರಿದಿದ್ದು, ಈವರೆಗೆ 81 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಡಿಸೆಂಬರ್ 3ರಂದು ಮುಂದಿನ ವಿಚಾರಣೆ ನಡೆಯಲಿದೆ. ಮೂರು ವರ್ಷಗಳ ಹಿಂದೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಈ ಹತ್ಯಾಕಾಂಡದಲ್ಲಿ ನ್ಯಾಯ ದೊರೆಯುವ ನಿರೀಕ್ಷೆಯೊಂದಿಗೆ ಸಂತ್ರಸ್ತ ಕುಟುಂಬ ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ಕಾಯುತ್ತಿದೆ.








