


ಉಡುಪಿ: ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿ ಉಡುಪಿಗೆ ಆಗಮಿಸಿದ್ದಾರೆ.
ಹೃದಯಾಘಾತದಿಂದ ನಿಧನ ಹೊಂದಿದ ತಾಯಿ ಸುಶೀಲಾ ಪೂಜಾರ್ತಿ ಅವರ ಅಂತ್ಯಸಂಸ್ಕಾರ ಇಂದು ಮಲ್ಪೆಯ ನೆರ್ಗಿಯ ಹಿರಿಯ ಮನೆಯಲ್ಲಿ ನಡೆಯಲಿದೆ.
ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ರವಿ ಪೂಜಾರಿಯನ್ನ ಬೆಂಗಳೂರಿನಿಂದ ಉಡುಪಿಗೆ ಕರೆತರಲಾಗಿದೆ. ಅಂತ್ಯಕ್ರಿಯೆ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ರವಿ ಪೂಜಾರಿ ಇದೀಗ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಅವರು ಮೊನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಐವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದು, ಅವರಲ್ಲಿ ರವಿ ಪೂಜಾರಿ ಕೂಡ ಒಬ್ಬ.
ಮಲ್ಪೆಯ ನೆರ್ಗಿಯ ಹಿರಿಯ ಮನೆಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದ್ದು, ನ್ಯಾಯಾಲಯದ ಅನುಮತಿ ಪಡೆದು ರವಿ ಪೂಜಾರಿಯನ್ನು ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ ಸಿಟಿ ಆರ್ಮ್ಡ್ ರಿಸರ್ವ್ ಪೊಲೀಸರಿಗೆ ಈ ಸಂಬಂಧ ನ್ಯಾಯಾಲಯ ನಿರ್ದೇಶನ ನೀಡಿತ್ತು. ಜೈಲು ಇಲಾಖೆಯಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಹೆಚ್ಚುವರಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯೂ ಸ್ಥಳೀಯ ಭದ್ರತಾ ವ್ಯವಸ್ಥೆ ಮಾಡಿದೆ.
ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ರವಿ ಪೂಜಾರಿಯನ್ನ ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿದೆ. ಪೊಲೀಸ್ ಎಸ್ಕಾರ್ಟ್ ಭದ್ರತೆಯ ಸಂಪೂರ್ಣ ವೆಚ್ಚವನ್ನೂ ರವಿ ಪೂಜಾರಿಯೇ ಭರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.








