


ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಿಗೆ ಮರು ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ನವೆಂಬರ್ 14ರಂದು ಸಲ್ಲಿಸಿರುವ ಪೂರಕ ಅಫಿಡವಿಟ್‌ನಲ್ಲಿ, ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ ಹೊಸ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿರುವವರು ಮತ್ತೆ ಹೆಸರು ಸೇರ್ಪಡೆಗೊಳಿಸಲು ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.ಈ ರೀತಿ ಅರ್ಜಿ ಸಲ್ಲಿಸುವುದರಿಂದ ಮಾತ್ರ ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ಯಾವುದೇ ಕ್ರಿಮಿನಲ್ ಕ್ರಮ ಕೈಗೊಳ್ಳುವುದಿಲ್ಲ ಎಂದು ಆಯೋಗ ಭರವಸೆ ನೀಡಿದೆ.

ಆದರೆ, ಅರ್ಜಿದಾರರು ಬೇರೆ ಯಾವುದೇ ಲೋಕಸಭೆ ಅಥವಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರಬಾರದು ಹಾಗೂ ಅರ್ಜಿಯಲ್ಲಿನ ಘೋಷಣೆ ಕಾನೂನುಬದ್ಧವಾಗಿರಬೇಕು ಎಂದು ತಿಳಿಸಿದೆ.ಇದಲ್ಲದೆ, ಗೈರುಹಾಜರಿ, ಸ್ಥಳಾಂತರ, ಮರಣ ಅಥವಾ ನಕಲಿ ನೋಂದಣಿ (ASDD) ಕಾರಣಗಳಿಂದ ಹೆಸರು ಕೈಬಿಡಲಾದ ಮತದಾರರಿಗೂ ಮರು ಸೇರ್ಪಡೆಗೆ ಮತ್ತೊಂದು ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದ್ದು, ಅರ್ಹ ಮತದಾರರು ಅಂತಿಮ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.








