Tuesday, November 17, 2026
spot_imgspot_img
spot_imgspot_img

ಬಳ್ಳಾರಿ: ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಬಾಲಕರು ಈಜಲು ಹೋಗಿ ಕಾಲುವೆ ಪಾಲು

- Advertisement -
- Advertisement -

ಬಳ್ಳಾರಿ: ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ, ವಾಪಸಾಗುವಾಗ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದ ಇಬ್ಬರು ಬಾಲಕರು ಈಜಲು ಹೋಗಿ ಕಾಲುವೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಎಚ್. ವೀರಾಪುರ ಗ್ರಾಮದ ನಿವಾಸಿಗಳಾದ ಸತೀಶ್ (16) ಮತ್ತು ಫಕ್ಕೀರಪ್ಪ (12) ಮೃತಪಟ್ಟ ದುರ್ದೈವಿ ಬಾಲಕರು.

ಸತೀಶ್ ಮತ್ತು ಫಕ್ಕೀರಪ್ಪ ಇಬ್ಬರೂ ಕೊಪ್ಪಳ ಜಿಲ್ಲೆಯ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ದರ್ಶನಕ್ಕೆಂದು ತೆರಳಿದ್ದರು. ದೇವರ ದರ್ಶನ ಮುಗಿಸಿ ಊರಿಗೆ ವಾಪಸಾಗುವ ಮಾರ್ಗಮಧ್ಯೆ ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿರುವ ತಮ್ಮ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಗ್ರಾಮದ ಸಮೀಪವಿರುವ ಕಾಲುವೆಯಲ್ಲಿ ಈಜಾಡಲು ಇಬ್ಬರೂ ಬಾಲಕರು ತೆರಳಿದ್ದಾರೆ.

ಕಾಲುವೆಯ ನೀರಿನ ಆಳ ಮತ್ತು ಹರಿವಿನ ಅಂದಾಜಿಲ್ಲದೆ ನೀರಿಗೆ ಇಳಿದ ಇಬ್ಬರೂ ಬಾಲಕರಿಗೆ ಸರಿಯಾಗಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕಾಲುವೆಯಲ್ಲಿ ಶೋಧ ನಡೆಸಿ ಇಬ್ಬರೂ ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!