

ಮಂಗಳೂರು: ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆ ಘಟಕಗಳ ವಾರ್ಷಿಕ ಕ್ರೀಡಾಕೂಟ-2026 ನವೆಂಬರ್ 19ರಿಂದ 21ರವರೆಗೆ ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ.ನವೆಂಬರ್ 19ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಕ್ರೀಡಾಕೂಟವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಐಎಎಸ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎ.ಎನ್. ಪ್ರಕಾಶ್ ಗೌಡ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಐಪಿಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಐಪಿಎಸ್ ಉಪಸ್ಥಿತರಿರಲಿದ್ದಾರೆ.


ಉದ್ಘಾಟನಾ ಸಮಾರಂಭದಲ್ಲಿ ಪಥಸಂಚಲನ, ವಂದನೆ ಸ್ವೀಕಾರ, ಸ್ವಾಗತ ಭಾಷಣ, ಉದ್ಘಾಟಕರ ಭಾಷಣ, ಕ್ರೀಡಾ ಜ್ಯೋತಿಯ ಆಗಮನ ಹಾಗೂ ಕ್ರೀಡಾ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು.ನವೆಂಬರ್ 21ರಂದು ಶನಿವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ (ಪ್ರಭಾರ) ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ 100 ಮೀಟರ್ ಓಟದ ಅಂತಿಮ ಸ್ಪರ್ಧೆ, ಹಗ್ಗಜಗ್ಗಾಟದ ಅಂತಿಮ ಸ್ಪರ್ಧೆ, ಪಥಸಂಚಲನ, ಬಹುಮಾನ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆ ಘಟಕಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಪೊಲೀಸ್ ಸಿಬ್ಬಂದಿಯಲ್ಲಿ ಕ್ರೀಡಾಸ್ಫೂರ್ತಿ, ದೈಹಿಕ ಕ್ಷಮತೆ ಹಾಗೂ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ.







