ಮಾಧ್ಯಮಗಳ ವಿರುದ್ಧದ ಪ್ರಕರಣ ರದ್ದು; ಪೊಲೀಸ್ ಇಲಾಖೆಗೆ ತೀವ್ರ ತರಾಟೆ
ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
ಪುತ್ತೂರು: ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಪೊಲೀಸ್ ಇಲಾಖೆಗೆ ತೀವ್ರ ಎಚ್ಚರಿಕೆ ನೀಡಿದ್ದು, ಮಾಧ್ಯಮಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ವೆಬ್ ಮಾಧ್ಯಮಗಳ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ನಲ್ಲಿ ಹಾಜರಿದ್ದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ. ಈರಯ್ಯ ಅವರನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆತ್ತಿಕೊಂಡರು.
ಮಾಧ್ಯಮಗಳು ಪ್ರಕಟಿಸಿರುವುದು ಸತ್ಯ ಸಂಗತಿಗಳಾಗಿವೆ.
ಘಟನೆ ನಡೆದಿರುವುದು ಹಾಗೂ ನಾಯಕರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ನಿಜ. ಈ ವಿಚಾರವನ್ನು ಛಾಯಾಚಿತ್ರ ಸಹಿತ ವರದಿ ಮಾಡಲಾಗಿದೆ. ಇದರಲ್ಲಿ ಕೋಮು ದ್ವೇಷ ಹರಡುವ ಅಥವಾ ಮಾನಹಾನಿ ಮಾಡುವ ಯಾವುದೇ ಅಂಶಗಳಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಪೊಲೀಸ್ ಇಲಾಖೆ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಪೊಲೀಸರ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ನ್ಯಾಯಮೂರ್ತಿಗಳು, ಪೊಲೀಸ್ ಇಲಾಖೆಗೆ ತಲಾ ಐದು ಲಕ್ಷ ರೂ. ಪರಿಹಾರ ವಿಧಿಸುವುದಾಗಿ ಹೇಳಿದರು.
ಈ ವೇಳೆ ಎಸ್.ಐ. ಈರಯ್ಯ ಅವರು ಬೇಷರತ್ ವಿಷಾದ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಬಳಿಕ ಮಾಧ್ಯಮಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿತು.
ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಜಯ
ಮಾಧ್ಯಮಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿರುವುದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಯೂನಿಯನ್ನ ಪುತ್ತೂರು ತಾಲೂಕು ಘಟಕ ತಿಳಿಸಿದೆ.
ಯಾವುದೇ ತಪ್ಪು ಮಾಡದಿದ್ದರೂ ಮಾಧ್ಯಮಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು.
ಆರಂಭದಲ್ಲಿಯೇ ಇದನ್ನು ವಿರೋಧಿಸಿ ಯೂನಿಯನ್ ಧ್ವನಿ ಎತ್ತಿತ್ತು. ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಹಾಗೂ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅವರ ನೇತೃತ್ವದಲ್ಲಿ ತೊಂದರೆಗೊಳಗಾದ ಮಾಧ್ಯಮಗಳ ಪರವಾಗಿ ಕಾನೂನು ಹೋರಾಟ ನಡೆಸಲಾಗಿತ್ತು. ಹೈಕೋರ್ಟ್ ನ್ಯಾಯವಾದಿಗಳಾದ ಡಾ. ಅರುಣ್ಶ್ಯಾಮ್ ಪುತ್ತೂರು ಹಾಗೂ ಸುಯೋಗ್ ಹೇರಳೆ ಅವರು ಸಮರ್ಥವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ಪ್ರಕರಣದಲ್ಲಿ ಕಹಳೆ ನ್ಯೂಸ್ ಸೇರಿದಂತೆ ಒಟ್ಟು ಮೂರು ಮಾಧ್ಯಮಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.








