


ಬೆಂಗಳೂರು: ಕಳೆದ 9 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಹಿರಿಯ ನಟಿ ತಾರಾ ಅವರು ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಅಳಲನ್ನು ಆಲಿಸಿದ ಅವರು, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ನಡೆ ಹಾಗೂ ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ನಟಿ ತಾರಾ, ಸಾಮಾನ್ಯವಾಗಿ ನಾವೆಲ್ಲಾ ಹೆಣ್ಣುಮಕ್ಕಳು ಒಟ್ಟಿಗೆ ಸೇರಿದಾಗ ಮೊದಲು ಹೇಗಿದ್ದೀರಾ ಎಂದು ಪರಸ್ಪರ ಯೋಗಕ್ಷೇಮ ವಿಚಾರಿಸುತ್ತೇವೆ. ಆದರೆ ನೀವು ಕಳೆದ 9 ದಿನಗಳಿಂದ ಇಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದೀರಿ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸೂಕ್ತ ಗೌರವಧನ ನೀಡುವಂತೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಹೆಣ್ಣುಮಕ್ಕಳು ಎಂದಿಗೂ ಸುಮ್ಮನೆ ದುಂದುವೆಚ್ಚ ಮಾಡುವುದಿಲ್ಲ, ಒಂದು ರೂಪಾಯಿ ಖರ್ಚು ಮಾಡಬೇಕಾದರೂ ನೂರು ಬಾರಿ ಯೋಚನೆ ಮಾಡುತ್ತೇವೆ. ಒಂದು ಹೆಣ್ಣುಮಗು ಇಡೀ ಸಂಸಾರದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾಳೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದು, ಇವರ ನೋವನ್ನು ಕೇಳಿಸಿಕೊಳ್ಳುವ ಕಿವಿಗಳು ಸರ್ಕಾರಕ್ಕೆ ಇರಬೇಕು ಎಂದು ಚಾಟಿ ಬೀಸಿದರು.
ಎಲ್ಲಿ ಹೆಣ್ಣನ್ನು ಪೂಜಿಸುತ್ತೇವೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ, ಆದರೆ ಎಲ್ಲಿ ಹೆಣ್ಣನ್ನು ಜರಿಯುತ್ತಾರೋ ಅಲ್ಲಿ ಕೆಡಕು ಉಂಟಾಗುತ್ತದೆ. ಹೆಣ್ಣು ತನ್ನ ಮನೆ ಹಾಗೂ ಹೊರಗಿನ ಕೆಲಸಗಳೆರಡನ್ನೂ ಸಮರ್ಥವಾಗಿ ನಿಭಾಯಿಸುತ್ತಾಳೆ. ಒಬ್ಬ ತಾಯಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ದುಡಿಯುತ್ತಾಳೆ. ಹೀಗಿದ್ದರೂ ಸಮಾಜವು ಪ್ರತಿ ಹಂತದಲ್ಲೂ ಹೆಣ್ಣುಮಕ್ಕಳನ್ನು ನಿರ್ಲಕ್ಷಿಸುತ್ತಲೇ ಇದೆ. ಆಶಾ ಕಾರ್ಯಕರ್ತೆಯರನ್ನು 9 ದಿನಗಳ ಕಾಲ ಹೀಗೆ ಬೀದಿಯಲ್ಲಿ ಹೋರಾಟ ಮಾಡಲು ಸರ್ಕಾರ ಬಿಡಲೇಬಾರದಿತ್ತು. ಪ್ರತಿಭಟನೆಗೂ ಮುನ್ನವೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಅದಕ್ಕೆ ಸ್ಪಂದಿಸದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ಮೊದಲು ಈ ಕಾರ್ಯಕರ್ತೆಯರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಸೇರಿಸುವ ಕೆಲಸ ಮಾಡಲಿ ಎಂದು ಅವರು ಬಲವಾಗಿ ಒತ್ತಾಯಿಸಿದರು.
ಕಳೆದ 11 ತಿಂಗಳ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೇವಲ 5 ಬಾರಿ ಮಾತ್ರ ಗೌರವಧನ ಬಿಡುಗಡೆಯಾಗಿರುವ ಕಟು ವಾಸ್ತವವನ್ನು ಪ್ರಸ್ತಾಪಿಸಿದ ನಟಿ, ತಿಂಗಳಿಗೆ ಸರಿಯಾಗಿ ಸಂಬಳವೇ ಬರುತ್ತಿಲ್ಲ ಎಂದ ಮೇಲೆ ಇವರು ಹೇಗೆ ತಾನೇ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು. ಇನ್ನು ಮುಂದೆ ಪ್ರತಿ ತಿಂಗಳ 1ನೇ ತಾರೀಖಿನಂದೇ ತಪ್ಪದೆ ವೇತನ ಕೈಸೇರುವಂತಹ ವ್ಯವಸ್ಥೆ ಜಾರಿಯಾಗಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಕಾರ್ಯಕರ್ತೆಯರಲ್ಲಿ ಆತ್ಮವಿಶ್ವಾಸ ತುಂಬಿದ ಅವರು, ನನ್ನ ಬಾಯಲ್ಲಿ ಏನಾದರೂ ಹೇಳಿದರೆ ಅದು ಒಳ್ಳೆಯದಾಗುತ್ತದೆ ಎಂಬ ಮಾತಿದೆ, ಹೀಗಾಗಿ ಇನ್ನೆರಡು ದಿನಗಳ ಒಳಗಾಗಿ ನಿಮಗೆ ಒಳ್ಳೆಯ ಸುದ್ದಿ ಬಂದೇ ಬರುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ, ಆಶಾ ಕಾರ್ಯಕರ್ತೆಯರು ಬಂದು ಕೇಳಿದಾಗಲೆಲ್ಲಾ ಕಂಠಿಹಾರ ಕಿತ್ತುಕೊಡುತ್ತಾರಾ ಎಂದು ವ್ಯಂಗ್ಯವಾಡಿದ್ದ ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ಹೇಳಿಕೆಗೆ ನಟಿ ತಾರಾ ಕೆಂಡಾಮಂಡಲರಾದರು. ಕಂಠಿಹಾರ ಕೊಡುವುದಕ್ಕೆ ನೀನೇನು ರಾಜನಾ? ಜನಸಾಮಾನ್ಯರು ಮತ ಹಾಕಲಿಲ್ಲ ಎಂದರೆ ನೀನು ಚುನಾವಣೆಯಲ್ಲಿ ಗೆಲ್ಲುವುದಕ್ಕೂ ಸಾಧ್ಯವಿಲ್ಲ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಇಡೀ ಕುಟುಂಬವನ್ನೇ ಬಿಟ್ಟು ಈ ಹೆಣ್ಣುಮಕ್ಕಳು ಇಲ್ಲಿ ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ಸಚಿವರು ಇಲ್ಲಿಗೆ ಬಂದು ಆಶಾ ಕಾರ್ಯಕರ್ತೆಯರ ಕಾಲಿಗೆ ಬಿದ್ದರೂ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರು, ಕನಿಷ್ಠ ಪಕ್ಷ ಅವರು ಕೊಟ್ಟ ಆ ಆಶ್ವಾಸನೆಯನ್ನಾದರೂ ಸರ್ಕಾರ ಮೊದಲು ಈಡೇರಿಸಲಿ. ಒಂದು ವೇಳೆ ಇವರ ಬೇಡಿಕೆಗಳು ಈಡೇರದಿದ್ದರೆ, ಇದು ಕೇವಲ ಕರ್ನಾಟಕ ರಾಜ್ಯದ ಹೋರಾಟವಾಗಿ ಉಳಿಯದೆ ಇಡೀ ರಾಷ್ಟ್ರಮಟ್ಟದ ಬೃಹತ್ ಹೋರಾಟವಾಗಿ ಪರಿಣಮಿಸಲಿದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








