Thursday, November 26, 2026
spot_imgspot_img
spot_imgspot_img

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಪತ್ತೆ: ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರ ಬಂಧನ; ₹2.73 ಕೋಟಿ ಮೌಲ್ಯದ ಚಿನ್ನ, ನಗದು ವಶ

- Advertisement -
- Advertisement -

ಮಂಗಳೂರು: ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಿಬ್ಬಂದಿ ದುಬೈ ಮತ್ತು ಕಾಸರಗೋಡು ಮೂಲದ ಕಳ್ಳಸಾಗಣೆದಾರರೊಂದಿಗೆ ಶಾಮೀಲಾಗಿ ಚಿನ್ನ ಕಳ್ಳಸಾಗಣೆಗೆ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಘಟಕ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.ಯುಎಇಯಿಂದ ಆಗಮಿಸುವ ಕೆಲವು ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಬಚ್ಚಿಟ್ಟು ಹೋಗುವ ಚಿನ್ನವನ್ನು ತೆಗೆದುಕೊಂಡು ಹೋಗುವ ಕೃತ್ಯದಲ್ಲಿ ಈ ಸಿಬ್ಬಂದಿಯು ಭಾಗಿಯಾಗಿದ್ದರು ಎನ್ನಲಾಗಿದೆ.ಖಚಿತ ಮಾಹಿತಿಯ ಆಧಾರದ ಮೇಲೆ ಎಂಆರ್‌ಯು ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲಿ ರಹಸ್ಯ ನಿಗಾ ಇರಿಸಿ ಸಂಬಂಧಪಟ್ಟ ಸಿಬ್ಬಂದಿಯನ್ನು ಪತ್ತೆಹಚ್ಚಿದರು.

ಅಂದರೆ ನ.23ರಂದು ಬೆಳಗ್ಗೆ ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನವನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಓರ್ವ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕಾರಿಗಳು ತಡೆದು ನಿಲ್ಲಿಸಿ ಆತನಿಂದ ಪೇಸ್ಟ್ ರೂಪದಲ್ಲಿದ್ದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡರು. ಈತ ಈ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಲು ಉದ್ದೇಶಿಸಿದ್ದ ಎಂದು ತಿಳಿದುಬಂದಿದ್ದು, ಆ ಸಿಬ್ಬಂದಿಯು ವಿಮಾನ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ಕಾಸರಗೋಡು ಮೂಲದ ಮೂರನೇ ವ್ಯಕ್ತಿಗೆ ತಲುಪಿಸಲು ಯೋಜಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿಗಳು ಎರಡನೇ ಮತ್ತು ಮೂರನೇ ಆರೋಪಿಯನ್ನು ವಶಕ್ಕೆ ಪಡೆದಾಗ ಸುಮಾರು 73 ಲಕ್ಷ ರೂ. ನಗದು ಪತ್ತೆಹಚ್ಚಿದರು. 2 ಕೋಟಿ ರೂ. ಮೌಲ್ಯದ 1.65 ಕೆಜಿ ವಿದೇಶಿ ಮೂಲದ ಚಿನ್ನ, 73 ಲಕ್ಷ ರೂ. ನಗದು ಹಾಗೂ ಕಳ್ಳಸಾಗಣೆಗೆ ಬಳಸಲಾದ ಒಂದು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡೆದಿದ್ದಾರೆ.

ಮೂವರು ಆರೋಪಿಗಳನ್ನು ಕಸ್ಟಮ್ಸ್ ಕಾಯ್ದೆ 1962ರಡಿ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಡಿ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!