ನವದೆಹಲಿ: “ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಿಲ್ಲ” ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ತೈಲಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಲಾಗುತ್ತಾ ಎನ್ನುವ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, “ಕಳೆದ 300 ದಿನಗಳಲ್ಲಿ 60 ದಿನಗಳ ಕಾಲ ಬೆಲೆ ಏರಿಕೆಯಾಗಿದೆ. ಸುಮಾರು 250 ದಿನಗಳ ಕಾಲ ನಾವು ಬೆಲೆ ಏರಿಕೆಯೂ ಮಾಡಿಲ್ಲ, ಇಳಿಕೆಯೂ ಮಾಡಿಲ್ಲ” ಎಂದಿದ್ದಾರೆ.

“ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆ ಹಾಗೂ ಇಳಿಕೆಯಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಯ ಮುಖಾಂತರ ಸರ್ಕಾರಕ್ಕೆ ಸಂಪನ್ಮೂಲ ಬರುತ್ತದೆ. ಸಂಗ್ರಹವಾದ ತೆರಿಗೆಯನ್ನು ಅಭಿವೃದ್ದಿ ಯೋಜನೆಗಳು ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

“ತೆರಿಗೆ ಸಂಗ್ರಹ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಎಚ್ಚರಿಕೆಯಿಂದಿದೆ. ಏಕೆಂದರೆ, ಪ್ರತಿಯೋರ್ವರಿಗೂ ಕೂಡಾ ತನ್ನದೇ ಆದ ಅಭಿವೃದ್ದಿಯ ಬದ್ದತೆ ಇರುತ್ತದೆ. ಈ ಹಿನ್ನೆಲೆ ಈ ಮಾರ್ಗದಿಂದ ಕೆಲ ಸಂಪನ್ಮೂಲಗಳ ಅಗತ್ಯವಿದೆ. ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಬೆಲೆ ತೆರಿಗೆ ಸಂಗ್ರಹವು ಗಣನೀಯ ಪ್ರಮಾಣವಾಗಿ ಸಂಗ್ರಹವಾಗುತ್ತದೆ” ಎಂದಿದ್ದಾರೆ.

“ಪ್ರತೀ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರೂ. 2.50 ವ್ಯಾಟ್ ಕಡಿತಗೊಳಿಸುವಂತೆ ರಾಜ್ಯಗಳಲ್ಲಿ ಕೇಂದ್ರ ಮನವಿ ಮಾಡಿಕೊಂಡಿದೆ” ಎಂದು ತಿಳಿಸಿದ್ದಾರೆ.

