ಬೆಂಗಳೂರು: ಎಟಿಎಂ ಹಣ ಕದ್ದು ಪರಾರಿಯಾಗಿದ್ದ ಚಾಲಕ ನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮಂಡ್ಯ ಮೂಲದ ಯೋಗೇಶ್ ಬಂಧಿತ ಆರೋಪಿಯಾಗಿದ್ದಾನೆ. ಫೆ. 3ರಂದು ಎಟಿಎಂ ಹಣ ಕದ್ದು ಅತ್ತೆ ಮಗಳೊಂದಿಗೆ ಎಸ್ಕೇಪ್ ಆಗಿದ್ದ ಯೋಗೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಯೋಗೇಶ್ ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದ. ಆರೋಪಿಯ ಪತ್ತೆಗೆ ಸುಬ್ರಹ್ಮಣ್ಯ ನಗರ ಪೊಲೀಸರು ಮುಂದಾಗಿದ್ದರು. ಹಣ ಕದ್ದು ಆಶ್ರಯಕ್ಕಾಗಿ ಸ್ನೇಹಿತರನ್ನು ಸಂಪರ್ಕಿಸಿದ್ದ ಆರೋಪಿ ಯೋಗೇಶ್ ಆತನ ಮನೆಯಲ್ಲೇ ಉಳಿದುಕೊಂಡಿದ್ದ. ಯೋಗೇಶ್ನ ಕಾಲ್ ಟ್ರ್ಯಾಕ್ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೆಂಡತಿ, ಮಕ್ಕಳಿದ್ದರೂ ಅತ್ತೆ ಮಗಳ ಜೊತೆ ಹಣದೊಂದಿಗೆ ಎಸ್ಕೇಪ್ ಆಗಿದ್ದ ಯೋಗೇಶ್. ಮೈಸೂರಿನಲ್ಲಿ ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದಾಗ ಬಲೆಗೆ ಬಿದ್ದ ಆರೋಪಿ ಯೋಗೇಶ್ನನ್ನು ಬಂಧಿಸಲಾಗಿದೆ. ಯೋಗೇಶ್ ಬಂಧನದ ಬಳಿಕ ಪೊಲೀಸರಿಗೇ ಆಶ್ಚರ್ಯವಾಗಿದ್ದು, ಎಟಿಎಂಗೆ ತುಂಬುವ 64 ಲಕ್ಷ ರೂ. ಹಣ ಕದ್ದ ಆತನ ಬಳಿ ಕೇವಲ 15 ಸಾವಿರ ರೂ. ಮಾತ್ರ ಇತ್ತು.

ಉಳಿದ ಹಣವೆಲ್ಲಿ ಎಂದು ಬಾಯಿ ಬಿಡದೆ ಸತಾಯಿಸುತ್ತಿರುವ ಯೋಗೇಶ್ನನ್ನು ವಿಚಾರಣೆ ನಡೆಸಲಾಗುತ್ತಿದೆ. ಸುಬ್ರಹ್ಮಣ್ಯ ನಗರ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿರುವ ಸೆಕ್ಯೂರ್ ಆ್ಯಂಡ್ ವ್ಯಾಲ್ಯೂ ಏಜೆನ್ಸಿ ವಾಹನದ ಚಾಲಕ ಯೋಗೇಶ್ ಫೆ. 3ರಂದು ಬೆಂಗಳೂರಿನ ನವರಂಗದ ಬಳಿ ಇರುವ ಆ್ಯಕ್ಸಿಸ್ ಬ್ಯಾಂಕ್ಗೆ ಹಣ ತುಂಬಿಸಲು ಏಜೆನ್ಸಿಯ ಸಿಬ್ಬಂದಿ ಜೊತೆ ಹೋಗಿದ್ದ. ಆಗ 64 ಲಕ್ಷ ರೂ. ಕದ್ದು ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ. ಆತನ ಊರಾದ ಮಂಡ್ಯ, ಹಾಸನ ಸೇರಿದಂತೆ ಪೊಲೀಸರು ಹುಡುಕಾಟ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಕೊನೆಗೂ ಮೈಸೂರಿನಲ್ಲಿ ಆತ ಸಿಕ್ಕಿಬಿದ್ದಿದ್ದಾನೆ.

