ಚಿಕ್ಕಬಳ್ಳಾಪುರ: ಪ್ರಿಯಕರನೇ ಪ್ರಿಯತಮೆಯ ಮಗನನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದ್ದು, ಕಾಣೆಯಾಗಿದ್ದ 6 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆಯಾಗಿದೆ.

ವಾಟದ ಹೊಸಹಳ್ಳಿಯ 6 ವರ್ಷದ ಬಾಲಕ ವಿಷ್ಣುವರ್ಧನ್ನನ್ನು ಕೊಲೆ ಮಾಡಲಾಗಿದೆ. ವಾಟದ ಹೊಸಹಳ್ಳಿ ಗ್ರಾಮದ ರಾಮಾಂಜಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಗೌರಿಬಿದನೂರು ತಾಲೂಕಿನ ಸಾದರ್ಲಹಳ್ಳಿ ಬಳಿ ಅಸ್ಥಿಪಂಜರ ಪತ್ತೆಯಾಗಿದೆ.

ಬಾಲಕ ವಿಷ್ಣುವರ್ಧನ್ ಪ್ರಭಾವತಿ ಹಾಗೂ ನಾರಾಯಣಸ್ವಾಮಿ ದಂಪತಿಯ ಮಗನಾಗಿದ್ದು, ಮಾರ್ಚ್ 16 ರಂದು ನಿಗೂಢವಾಗಿ ಕಾಣೆಯಾಗಿದ್ದ. ವಿಷ್ಣುವರ್ಧನ್ ನಾಪತ್ತೆ ಪ್ರಕರಣ ಭೇದಿಸಿದ ಗೌರಿಬಿದನೂರು ಪೊಲೀಸರು, ರಾಮಾಂಜಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಹರಣ ಹಾಗೂ ಕೊಲೆ ಸತ್ಯ ಬಯಲಾಗಿದೆ.

ಪ್ರಭಾವತಿ ಹಾಗೂ ರಾಮಾಂಜಿ ನಡುವೆ ಅನೈತಿಕ ಸಂಬಂಧ ಇತ್ತು. ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಅದೇ ದ್ವೇಷ ಹಾಗೂ ಮತ್ತೆ ಪ್ರಭಾವತಿ ಒಲಿಸಿಕೊಳ್ಳಲು ವಿಷ್ಣುವರ್ಧನ್ನನ್ನು ರಾಮಾಂಜಿ ಅಪಹರಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದ್ದು ಆರೋಪಿ ರಾಮಾಂಜಿ ಬಾಲಕ ವಿಷ್ಣುವರ್ಧನ್ನ ಕತ್ತು ಹಿಸುಕಿ ಕೊಲೆ ಮಾಡಿ, ಮೂಟೆಯಲ್ಲಿ ಹಾಕಿ ಬಿಸಾಡಿದ್ದ. ಗೌರಿಬಿದನೂರು ಪೊಲೀಸರು ಇದೀಗ ಆರೋಪಿ ರಾಮಾಂಜಿಯನ್ನು ಬಂಧಿಸಿದ್ದಾರೆ.

