ನವದೆಹಲಿ: ಅದಾನಿ ಎಂಟರ್ಪ್ರೈಸಸ್ ಇಂದಿನ ಷೇರು ವಹಿವಾಟಿನ ಮೌಲ್ಯವು ಶೇ 25ರಷ್ಟು ಕುಸಿತ ಕಂಡಿದ್ದು,ಇದರಿಂದ ಕೇವಲ ಮೂರು ನಾಲ್ಕು ಗಂಟೆಗಳಲ್ಲಿ ಅದಾನಿ ಕಂಪನಿಗಳ ಷೇರು ಬೆಲೆಯಲ್ಲಿ 91,704 ಕೋಟಿ ರೂಪಾಯಿ ಕುಸಿತವಾಗಿದೆ.

ಅದಾನಿ ಸಮೂಹ ಸಂಸ್ಥೆಗಳಲ್ಲಿ ಷೇರು ಹೊಂದಿರುವ ಮೂರು ಎಫ್ಪಿಐ (ವಿದೇಶಿ ಬಂಡವಾಳ ಹೂಡಿಕೆ) ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಜಪ್ತಿ ಹಾಕಿಕೊಂಡಿದ್ದು, ಈ ಬಗ್ಗೆ ಬಹಿರಂಗಗೊಳ್ಳುತ್ತಲೇ ಷೇರು ಪೇಟೆಯಲ್ಲಿ ಭಾರೀ ಕುಸಿತ ಉಂಟಾಗಿದೆ.

‘ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕಾನಮಿಕ್ ಝೋನ್’ ಷೇರು ಮೌಲ್ಯ ಶೇ 18.75ರಷ್ಟು ಕುಸಿದು 681.50ರೂ. ಆಗಿದ್ದು, ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿ 1,165.35ರೂ ಆಗಿದೆ. ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯ ಶೇ 5ರಷ್ಟು ಕುಸಿದು 1,544.55ರೂ. ಆಗಿದೆ. ಅದಾನಿ ಟ್ರಾನ್ಸ್ಮಿಷನ್ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ 1,517.25ರೂ ಮತ್ತು ಅದಾನಿ ಪವರ್ ಷೇರು ಮೌಲ್ಯ ಶೇ 4.99ರಷ್ಟು ಕುಸಿದು 140.90 ರೂ.ಆಗಿದೆ ಎಂದು ವರದಿ ತಿಳಿಸಿದೆ.








