ಮಂಗಳೂರು: ಪದ್ಮಶ್ರೀ ಪುರಸ್ಕೃತ ದಿ. ಮಿಲ್ಕಾ ಸಿಂಗ್ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂದು ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಿಲ್ಕಾ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂತಾಪ ಸೂಚನೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯುತ್ತಿದ್ದು, ಅಲ್ಲಿ ಭಾರತೀಯ ಕ್ರೀಡಾಪಟುಗಳು ದಾಖಲೆ ನಿರ್ಮಿಸಬೇಕು ಎಂಬ ಆಶಯದೊಂದಿಗೆ ಭಾರತದ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಕಾ ಸಿಂಗ್‌ರನ್ನು ಸ್ಮರಿಸುವ ಕೆಲಸವನ್ನು ಕಾಂಗ್ರೆಸ್ ವತಿಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕ್ರೀಡಾ ಸಚಿವನಾಗಿದ್ದ ವೇಳೆ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ ಐದು ಕೋಟಿ ರೂ.ಗಳ ಅನುದಾನದೊಂದಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಅದು ನನೆಗುದಿಗೆ ಬಿದ್ದಿದೆ. ಈ ನಡುವೆ ನಗರದಲ್ಲಿ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಅದನ್ನು ಒದಗಿಸುವ ಪ್ರಯತ್ನ ಪ್ರಸಕ್ತ ಸರಕಾರ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಕ್ರೀಡಾಪಟು ಸುನೀಲ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ವಲೇರಿಯನ್, ಲಾರೆನ್ಸ್, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.









