
ಮಂಗಳೂರು: ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನ ಬಳಿ ಬಿಜೆಪಿ ವತಿಯಿಂದ ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸೆಗಣಿ ಮತ್ತು ಕೆಸರನ್ನು ಬಳಿದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಕ್ಟೋಬರ್ 2 ರಂದು ತಡರಾತ್ರಿ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಬಳಿ ಬಿಜೆಪಿ ವತಿಯಿಂದ ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ ಪ್ರಧಾನ ಮಂತ್ರಿಗಳ ಭಾವಚಿತ್ರಕ್ಕೆ ಸಗಣಿ ಹಾಗೂ ಕೆಸರನ್ನು ಬಳಿಯಲಾಗಿತ್ತು.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.
ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಓರ್ವ ಮಾನಸಿಕ ಅಸ್ವಸ್ಥ ವ್ಯಕ್ತಿ ಈ ಕೃತ್ಯ ಎಸಗಿರುವುದು ಕಂಡು ಬಂದಿತ್ತು. ಪೊಲೀಸರು ಈ ವ್ಯಕ್ತಿಯನ್ನು ಇಂದು ಪತ್ತೆ ಹಚ್ಚಿದಾಗ ಆತನು ಸಂಪೂರ್ಣ ವಾಗಿ ಮಾನಸಿಕ ಅಸ್ವಸ್ಥನಾಗಿರುವ ಬಗ್ಗೆ ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಉತ್ತರ ಎಪಿಪಿ ಹಾಗೂ ನ್ಯಾಯಾಧೀಶರನ್ನು ಸಂಪರ್ಕಿಸಿ ಪೊಲೀಸರು ಮಾಹಿತಿ ನೀಡಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಅವಶ್ಯಕತೆ ಇಲ್ಲವೆಂದು ತಿಳಿಸಿರುತ್ತಾರೆ.











