
ಇಂದು (ನವೆಂಬರ್ 26) ಸಂವಿಧಾನ ದಿನಾಚರಣೆ ನಿಮಿತ್ತ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳುವರು. ರಾಮನಾಥ್ ಕೋವಿಂದ್ ಸಂವಿಧಾನದ ಪ್ರಸ್ತಾವನೆಯನ್ನು ಓದಲಿದ್ದಾರೆ. ಸಂವಿಧಾನ ಸಭೆಯ ಡಿಬೇಟ್ಗಳ ಡಿಜಿಟಲ್ ಸ್ವರೂಪ, ಈವರೆಗಿನ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನದ ಕ್ಯಾಲಿಯೋಗ್ರಾಫ್ ಕಾಪಿಯನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೇ, ಸಂವಿಧಾನದ ನಿಮಿತ್ತ ಒಂದು ಆನ್ಲೈನ್ ಕ್ವಿಜ್ ಕೂಡ ಆಯೋಜಿಸಲಾಗಿದೆ.

ಅದಾದ ಬಳಿಕ ಸುಪ್ರೀಂಕೋರ್ಟ್ ಇಂದಿನಿಂದ ಎರಡು ದಿನ ಆಚರಿಸಲಿರುವ ಸಂವಿಧಾನ ದಿನವನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರು, ಸಾಲಿಸಿಟರ್ ಜನರಲ್ರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಸಂವಿಧಾನ ದಿನದ ನಿಮಿತ್ತ ಆನ್ಲೈನ್ನಲ್ಲಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮವಿದೆ. ಇದು ಒಟ್ಟು 23 ಭಾಷೆಗಳಲ್ಲಿ ಲಭ್ಯವಿದೆ. ಈ ಕಾರ್ಯಕ್ರಮವನ್ನು ಲೋಕಸಭಾ ಸ್ಪೀಕರ್ ಆಯೋಜಿಸಲಿದ್ದು, ಅವರೂ ಪಾಲ್ಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ನಡೆಯಲಿರುವ ವಿವಿಧ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.

1949ರಲ್ಲಿ ಭಾರತದ ಸಂವಿಧಾನವನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿದ ಸ್ಮರಣಾರ್ಥ ಪ್ರತಿವರ್ಷವೂ ನವೆಂಬರ್ 26ರನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಅಂದಹಾಗೆ ಸಂವಿಧಾನ ದಿನ ಆಚರಣೆ ಶುರುವಾಗಿದ್ದು 2015ರಿಂದ ಸಂವಿಧಾನದ ಮಹತ್ವ ಸಾರಲು ಈ ದಿನಾಚರಣೆ ಪ್ರಾರಂಭವಾಗಿದೆ. ಅದಕ್ಕೂ ಮೊದಲು 2010ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಂವಿಧಾನ ಗೌರವ ಯಾತ್ರೆಯನ್ನು ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದು.


