
ಕಾಸರಗೋಡು: ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತ ಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಪಾಣತ್ತೂರು ಸಮೀಪದ ಪರಿಯಾರದಲ್ಲಿ ನಡೆದಿದೆ.
ಮೃತಪಟ್ಟವರನ್ನು ಪಾಣತ್ತೂರು ಕುಂಡಪಳ್ಳಿಯ ವಿನೋದ್ (45) , ನಾರಾಯಣ (50) , ಕೆ.ಎಂ ಮೋಹನ್ (40) ,ಸುಂದರ ( 40) ಎನ್ನಲಾಗಿದೆ.

ಲಾರಿ ಚಾಲಕ ವಿಜಯನ್ , ಕ್ಲೀನರ್ ಅನಿಶ್ , ವೇಣುಗೋಪಾಲ್ , ಪ್ರಸನ್ನ ಗಾಯಗೊಂಡವರು ಮರ ಹೇರಿಕೊಂಡು ಕಲ್ಲಪಳ್ಳಿಯಿಂದ ಪಾಣತ್ತೂರಿಗೆ ತೆರಳುತ್ತಿದ್ದ ಲಾರಿ ಪರಿಯಾರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು , ಲಾರಿಯಲ್ಲಿದ್ದ ಮರದ ದಿಮ್ಮಿಗಳೆಡೆಯಲ್ಲಿ ಸಿಲುಕಿದ್ದ ಆರು ಮಂದಿಯನ್ನು ಸ್ಥಳೀಯರು, ಅಗ್ನಿಶಾಮಕದ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಹೊರತೆಗೆದರೂ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಗಂಭೀರ ಗಾಯಗೊಂಡಿದ್ದ ನಾರಾಯಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತಪಾಸಣೆಯಿಂದ ತಿಳಿದು ಬಂದಿದೆ. ಲಾರಿಯಲ್ಲಿ ಒಂಭತ್ತು ಮಂದಿ ಇದ್ದರೆನ್ನಲಾಗಿದೆ . ಮೃತಪಟ್ಟವರು ಲೋಡಿಂಗ್ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಮಗುಚಿ ಬಿದ್ದಾಗ ಕಾರ್ಮಿಕರು ಮರದ ದಿಮ್ಮಿಗಳಡಿ ಸಿಲುಕಿ ಈ ದುರ್ಘಟನೆ ನಡೆದಿದೆ. ಘಟನಾಸ್ಥಳಕ್ಕೆ ಉಪಜಿಲ್ಲಾಧಿಕಾರಿ ಡಿ.ಆರ್ ಮೇಘಶ್ರೀ , ತಹಶೀಲ್ದಾರ್ ಮುರಳಿ ಪೊಲೀಸರು , ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.


