

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಹನಿಟ್ರ್ಯಾಪ್ ಮಾಡಿದ ಘಟನೆ ನಡೆದಿದ್ದು ದೂರು ದಾಖಲಾದ 24 ಗಂಟೆಯೊಳಗೆ ಮೂವರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ನೌಕರಿ ಕೊಡಿಸುವುದಾಗಿ ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿಹಾಕಿ ಚಿತ್ರೀಕರಣ ಮಾಡಿಕೊಂಡು ನಗ್ನ ಫೋಟೊ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು, ದೂರು ದಾಖಲಾದ 24 ಗಂಟೆಯೊಳಗೆ ಹೆಡೆಮುರಿಕಟ್ಟಿ ಪ್ರಶಂಸಾರ್ಹ ಕಾರ್ಯ ಮಾಡಿದ್ದಾರೆ.
ದೂರು ದಾಖಲಾದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್(25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ ಗೋಪಾಲ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.

ಕಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ಕಳೆದ ಜ.17 ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು, ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಜ.18 ದೂರುದಾರರ ತಂದೆಯನ್ನು ಭೇಟಿ ಮಾಡಿ ವಿಡಿಯೋ ಡಿಲೀಟ್ ಮಾಡಬೇಕು ಎಂದಾದರೆ 15 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟರು. ಅಲ್ಲದೇ ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡು, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದಾರೆ.
ಹಣ ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ವಿಶೇಷ ತಂಡ ಗ ಆರೋಪಿಗಳನ್ನು ಹುಡುಕಿ 24 ಗಂಟೆ ಬಂಧಿಸಿದ್ದಾರೆ. ಈ ಮೂವರ ವಿರುದ್ಧ 386, 388, 406, 384, 342, 423 5 ಸಹಿತ 34 ಪ್ರಕರಣಗಳು ದಾಖಲಾಗಿವೆ.










