

ಮಂಡ್ಯ: ಯುವಕನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ನಟ ಜೈ ಜಗದೀಶ್ ಅವರು ಇಂದು ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದರು. ಅಲ್ಲದೆ, ಸಮಸ್ಯೆ ಬಗೆಹರಿಸಿಕೊಂಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥವಾಗಿದ್ದು, ಜೈ ಜಗದೀಶ್ ಅವರು ಕ್ಷಮೆ ಕೇಳಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಜೈ ಜಗದೀಶ್, ಕಳೆದ ಭಾನುವಾರ ನನ್ನ ಮತ್ತು ಚಂದ್ರು ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ನಾವು ಠಾಣೆಯಲ್ಲಿ ಕೂತು ಬಗೆಹರಿಸಿಕೊಂಡಿದ್ದೇವೆ ಮತ್ತು ರಾಜಿಯಾಗಿದ್ದೇವೆ. ನಾವಿಬ್ಬರು ಈಗ ಸ್ನೇಹಿತರು. ಯಾವುದೇ ಗಲಾಟೆಯಾಗಿರಲಿಲ್ಲ, ಸಣ್ಣ ಭಿನ್ನಾಭಿಪ್ರಾಯ ಅಷ್ಟೇ ಎಂದು ಹೇಳಿದ್ದಾರೆ.
ಜೂನ್ 5ರಂದು ಈ ಘಟನೆ ನಡೆದಿತ್ತು. ಚಂದ್ರು ಅವರು ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಜೈಗದೀಶ್ ಅವರು ಕಾರಿನಿಂದ ಬರುತ್ತಿದ್ದರು. ಪ್ರಯಾಣ ವೇಳೆ ಜೈ ಜಗದೀಶ್ ಕಾರಿನ ಮೇಲೆ ಜ್ಯೂಸ್ ಬಾಟೆಲ್ ಬಿದ್ದಿತ್ತು. ಬಸ್‌ನಲ್ಲಿದ್ದವರೇ ಬಾಟಲ್ ಎಸೆದಿದ್ದಾರೆ ಅಂದುಕೊಂಡಿದ್ದರು. ಇದೇ ಸಮಯಕ್ಕೆ ಚಂದ್ರು ಬಸ್‌ನಿಂದ ಕೆಳಗಿಳಿದಾಗ ಆತನೇ ಬಾಟೆಲ್ ಎಸೆದಿರಬೇಕೆಂದು ಭಾವಿಸಿ, ಬಸ್ಸಿನಿಂದ ಯಾಕೆ ಬಾಟಲಿ ಎಸೆಯುತ್ತಿಯಾ ಎಂದು ಪ್ರಶ್ನಿಸಿ ಕೆಟ್ಟ ಶಬ್ದಗಳಿಂದ ಬೈದದ್ದೂ ಅಲ್ಲದೇ, ಹಲ್ಲೆ ನಡೆಸಿದ್ದಾರೆ ಎಂದು ಬೆಳ್ಳೂರು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಇಂದು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

