

ಉಳ್ಳಾಲ: ತೊಕ್ಕೊಟ್ಟಿನ ಕಾಪಿಕಾಡು ಎಂಬಲ್ಲಿ ಲಾರಿ ಮತ್ತು ಎರಡು ಕಾರುಗಳ ನಡುವೆ ಸರಣಿ ಅಪಘಾತ ಏರ್ಪಟ್ಟಿದೆ. ಈ ಅಪಘಾತದಲ್ಲಿ ಧಾರ್ಮಿಕ ಮುಂದಾಳು ಕೆ.ಪಿ ಸುರೇಶ್ ಅವರು ಚಲಾಯಿಸುತ್ತಿದ್ದ ಕಾರು ಡಿವೈಡರ್ ಮೇಲೇರಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಮಾಡೂರು ಶ್ರೀ ಸಾಯಿಬಾಬ ಮಂದಿರದ ಮೊತ್ತೇಸರರಾದ ಕೆ.ಪಿ ಸುರೇಶ್ ಅವರು ಇಂದು ಬೆಳಗ್ಗೆ ತಮ್ಮ ಕಾರಲ್ಲಿ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಕಾಪಿಕಾಡು ಎಂಬಲ್ಲಿ ಸ್ಕೂಟರಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಸುರೇಶ್ ಅವರು ತನ್ನ ಕಾರನ್ನ ಹೆದ್ದಾರಿ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿದ ವೇಳೆ ಹಿಂದಿನಿಂದ ಬಂದ ಕಾರು ರಸ್ತೆ ಕ್ರಾಸ್ ಮಾಡುತ್ತಿದ್ದ ಟೆಂಪೊವೊಂದನ್ನ ತಪ್ಪಿಸುವ ಭರದಲ್ಲಿ ಸುರೇಶ್ ಅವರ ಕಾರಿನ ಹಿಂಬದಿಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುರೇಶ್ ಅವರ ಕಾರು ಡಿವೈಡರ್ ಮೇಲಕ್ಕೇರಿದೆ.

ಹಿಂದಿನಿಂದ ಅತೀ ವೇಗದಲ್ಲಿ ಬಂದ ಸರಕು ಲಾರಿಯು ಕೇರಳ ನೊಂದಣಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡು ಕಾರುಗಳು ನಜ್ಜು ಗುಜ್ಜಾಗಿದ್ದು ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











