
ಆಹಾರ ವಿತರಣಾ ಅಪ್ಲಿಕೇಶನ್‌ಗಳು ನಮ್ಮ ಜೀವನವನ್ನು ತುಲನಾತ್ಮಕವಾಗಿ ಸುಲಭಗೊಳಿಸಿದರೂ ಕೆಲವೊಮ್ಮೆ ಆಗುವ ತಪ್ಪುಗಳು ಗಂಭೀರವಾಗಿ ಪರಿಣಮಿಸುತ್ತದೆ. ಆರ್ಡರ್ ಮಾಡುವುದು ಒಂದು, ಕೈಗೆ ತಲುಪುದು ಇನ್ನೊಂದು, ಈ ರೀತಿಯ ಘಟನೆಗಳು ಆಗಾಗೆ ನಡೆಯುತ್ತಿರುತ್ತದೆ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಪರಿಣಾಮವಾಗಿ ಹೊಟೇಲ್ಗೆ 20ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಗ್ವಾಲಿಯರ್‌ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್ ಸಸ್ಯಹಾರಿ ಗ್ರಾಹಕರಿಗೆ ಮಟರ್ ಪನೀರ್ ಬದಲಿಗೆ ಚಿಕನ್ ಕರಿ ವಿತರಿಸಿ ತಕ್ಕ ಶಿಕ್ಷೆಯನ್ನು ಅನುಭವಿಸಿದೆ.

ವಕೀಲ ಸಿದ್ಧಾರ್ಥ್ ಶ್ರೀವಾಸ್ತವ ಎಂಬವರು ಜಿವಾಜಿ ಕ್ಲಬ್ ರೆಸ್ಟೋರೆಂಟ್ನಿಂದ ಝೋಮ್ಯಾಟೊ ಮೂಲಕ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಅದರಂತೆ ಆರ್ಡರ್ ಬಂದು ಕೈಸೇರಿದಾಗ ಮಟರ್ ಪನೀರ್ ಬದಲಿಗೆ ಚಿಕನ್ ಕರಿಯನ್ನು ತಪ್ಪಾಗಿ ನೀಡಿರುವುದು ತಿಳಿದುಬಂದಿದೆ. ಇದರಿಂದ ಅಸಮಧಾನಗೊಂಡ ಸಿದ್ಧಾರ್ಥ್, ಗ್ರಾಹಕರ ವೇದಿಕೆಯ ಬಾಗಿಲು ತಟ್ಟಿದರು. ಕ್ಲಬ್‌ನ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಿದ್ಧಾರ್ಥ್ ಆರೋಪಿಸಿದ್ದು, ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಾಗಿದೆ.

ಘಟನೆಯಿಂದ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಹೇಳಿದ ಗ್ರಾಹಕರ ವೇದಿಕೆ, ದೂರುದಾರರು ಕಾನೂನು ಹೋರಾಟದ ಸಂದರ್ಭದಲ್ಲಿ ಮಾಡಿದ ವೆಚ್ಚವನ್ನು ಮರುಪಾವಿತಿಸುವಂತೆ ಸೂಚಿಸಿ 20,000 ರೂ. ದಂಡ ವಿಧಿಸಿ ನಿರ್ದೇಶನ ಹೊರಡಿಸಿದೆ.
