2023 ರ ಮಹಿಳಾ ದಿನಾಚರಣೆಯ ಥೀಮ್

ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಮಹಿಳಾದಿನದ ಆರಂಭದ ಹಿಂದಿನ ಇತಿಹಾಸವೇನು, ಈ ಆಚರಣೆಯ ಮಹತ್ವವೇನು? ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ಮಹಿಳಾ ದಿನವನ್ನು ಆಚರಿಸುವುದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿವರ್ಷ ಮಾರ್ಚ್ ತಿಂಗಳ ಆರಂಭದಿಂದ ಅಂತ್ಯದವರೆಗೆ ಮಹಿಳೆಯರಿಗೆ ಸಂಭ್ರಮ. ಮಾರ್ಚ್ ಎಂದರೆ ಹೆಣ್ಣುಮಕ್ಕಳ ತಿಂಗಳು. ಮಾರ್ಚ್ ತಿಂಗಳ 8 ತಾರೀಕಿನಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಮಾರ್ಚ್ ತಿಂಗಳು ಪೂರ್ತಿ ಮಹಿಳೆಯರ ಸಾಧನೆಯ ಇತಿಹಾಸ, ಸಮಕಾಲೀನ ಸಮಾಜಕ್ಕೆ ಮಹಿಳೆಯರ ಕೊಡುಗೆ ಈ ವಿಷಯಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಈ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ಮಹಿಳಾ ದಿನವು ಲಿಂಗಭೇದ, ತಾರತಮ್ಯದಿಂದ ಮುಕ್ತವಾಗಿರುವ ಲಿಂಗ ಸಮಾನತೆಯ ಬಗ್ಗೆ ಜಗತ್ತಿಗೆ ಕರೆ ನೀಡುತ್ತದೆ. ಲಿಂಗ ಭೇದವನ್ನು ದೂರ ಮಾಡುವ ನಿಟ್ಟಿನಲ್ಲಿ ಮಹಿಳಾದಿನ ಸಂಭ್ರಮಿಸುವ ಜೊತೆಗೆ ಹೆಣ್ಣುಮಕ್ಕಳನ್ನು ಗೌರವಿಸಲಾಗುತ್ತದೆ.
ಪ್ರತಿ ವರ್ಷವೂ ಮಹಿಳಾ ದಿನವನ್ನು ಒಂದೊಂದು ಥೀಮ್ ಅಥವಾ ಪರಿಕಲ್ಪನೆ ಇರಿಸಿಕೊಂಡು ಆಚರಿಸಲಾಗುತ್ತದೆ. ಈ ವರ್ಷ ʼDigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನʼ. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂದಿನ 67ನೇ ಅಧಿವೇಶನದ ಆದ್ಯತೆಯ ಥೀಮ್ನೊಂದಿಗೆ ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ʼಲಿಂಗ ಸಮಾನತೆ ಮತ್ತು ಪ್ರತಿ ಮಹಿಳೆ ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣʼ ಎನ್ನುವುದು ಈ ವರ್ಷದ ಪರಿಕಲ್ಪನೆಯ ಒಟ್ಟಾರೆ ಸಾರಾಂಶ.








