


ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ನಡೆದಿದೆ. ವಿಜಯಪುರದ ಇಂಡಿಯಲ್ಲಿ 2 ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.
ಸಾತ್ವಿಕ್ ಮುಜಗೊಂಡ (2 ವರ್ಷ) ಆಟವಾಡಲು ಹೋಗಿದ್ದ ವೇಳೆ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಇಂದು (ಏಪ್ರಿಲ್ 03) ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಮಂಗಳವಾರ ಸಾತ್ವಿಕ್ ಮುಜಗೊಂಡ ಅವರ ಅಜ್ಜ ಶಂಕರಪ್ಪ ಹೊಲದಲ್ಲಿ ಬೋರ್‌ವೆಲ್ ಕೊರೆಸಿದ್ದರು. ಸುಮಾರಿ 400 ರಿಂದ 500 ಅಡಿ ಆಳ ಕೊರೆಸಿದ್ದರೂ, ನೀರು ಬಂದಿರಲಿಲ್ಲ. ಆ ಕಾರಣದಿಂದ ಹಾಗೆಯೇ ಬಿಡಲಾಗಿತ್ತು. ಇದೀಗ ಅವರ ಮೊಮ್ಮಗನೇ ಈ ಬಾವಿಗೆ ಬಿದ್ದಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಮಗುವಿಗೆ ಆಕ್ಸಜನ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಿಷಯ ತಿಳಿದಯುತ್ತಿದ್ದಂತೆಯೇ ಸ್ಥಳದಲ್ಲಿ ಜನರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಸಾತ್ವಿಕ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.