ಪುತ್ತೂರು: ಮನೆಲ ಕ್ರಿಸ್ತ ರಾಯ ಚರ್ಚ್ ಪಾದ್ರಿಯೋರ್ವರು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ವೃದ್ಧ ದಂಪತಿಗೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಫೆ.29 ರಂದು ನಡೆದಿದೆ.
ಪುಣಚ ಗ್ರಾಮದ ಪರಿಯಾಲ್ತಡ್ಕ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ ಚರ್ಚ್ ಪಾದ್ರಿ ಫಾ.ನೆಲ್ಸನ್ ಓಲಿವೆರಾರವರು ವಾಳೆ ಗುರಿಕಾರ ಆಲ್ಫೋನ್ಸ್ ಮೊಂತೇರೊರವರೊಂದಿಗೆ ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಫಾ.ನೆಲ್ಸನ್ ರವರು ವೃದ್ಧ ದಂಪತಿಗೆ ಚರ್ಚ್ ಗೆ ವರ್ಷದ ಸದಸ್ಯತನ ಮಾತ್ರ ನೀಡುವುದಲ್ಲದೆ ನೀವು ಚರ್ಚ್ ಶ್ರಮದಾನದ ಅಂಗವಾಗಿ ಕಳೆದ ಕೆಲವು ವರ್ಷಗಳಿಂದ ಯಾವುದೇ ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮಾತ್ರವಲ್ಲ ಕಾಲರ್ ಹಿಡಿದು ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತನ್ನ ತಂದೆ-ತಾಯಿ ಸಮಾನವಾದ ದಂಪತಿಗೆ ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ ಮನೆಲ ಚರ್ಚ್ ವ್ಯಾಪ್ತಿಯ ನಿವಾಸಿಗಳು ಕೂಡ ಪಾದ್ರಿಯ ವರ್ತನೆಗೆ ಬೇಸತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣವು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಠಾಣೆಗೆ ಪಾದ್ರಿಗಳ ದಂಡು ಬಂದಿದೆ. ಈ ಹಿಂದೆ ತಲಪಾಡಿ, ಸಂಪಿಗೆ ಚರ್ಚ್ ಗಳಲ್ಲೂ ಇದೇ ಪಾದ್ರಿ ಇದೇ ರೀತಿಯ ವರ್ತನೆ ತೋರಿರುತ್ತಾರೆ ಎಂಬುದು ಸ್ಥಳದಲ್ಲಿರುವರು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳೀಯರು ಆರೋಪಿ ಪಾದ್ರಿ ವಿರುದ್ಧ ಎಫ್.ಐ.ಆರ್ ದಾಖಲು ಮಾಡಬೇಕು ಎನ್ನುವುದು ನೊಂದ ದಂಪತಿಯ ಕುಟುಂಬ ಹಾಗೂ ಸ್ಥಳೀಯರಿಂದ ಆಗ್ರಹ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆ ಹಾಗೂ ವಲಯದ ಸ್ತ್ರೀ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕೂಡ ವೃದ್ಧ ದಂಪತಿ ಪರ ಕೂಗನ್ನು ವ್ಯಕ್ತಪಡಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಯಾವ ಚರ್ಚ್ ನಲ್ಲೂ ಇಂತಹ ಪ್ರಕರಣಗಳು ಆಗಬಾರದು, ಜೊತೆಗೆ ಇಂತಹ ಪಾದ್ರಿಗಳನ್ನು ಯಾವ ಚರ್ಚ್ ಗೂ ಸೇವೆಗೆ ನೇಮಿಸಬಾರದು ಎಂದು ಆಗ್ರಹಪಡಿಸಿದ್ದಾರೆ.
ಮನೆಲ ಚರ್ಚ್ ಪಾದ್ರಿಯ ಪ್ರಕರಣವು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಎಚ್ಚೆತ್ತ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾರವರ ಮಾರ್ಗದರ್ಶನದ ಮೇರೆಗೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಜೆ.ಬಿ ಸಲ್ದಾನ್ಹಾ ಹಾಗೂ ರೋಯ್ ಕ್ಯಾಸ್ಟಲಿನೋರವರು ಕೂಡಲೇ ಅನ್ವಯಿಸುವಂತೆ ಪ್ರಕರಣದ ಆರೋಪಿ ಮನೆಲ ಚರ್ಚ್ ಧರ್ಮಗುರು ಫಾ|ನೆಲ್ಸನ್ ಒಲಿವೆರಾರವರನ್ನು ಮನೆಲ ಚರ್ಚ್ ಧಾರ್ಮಿಕ ಸೇವೆಯಿಂದ ವಜಾಗೊಳಿಸಿರುತ್ತಾರೆ ಅಲ್ಲದೆ ಅದೇ ಜಾಗಕ್ಜೆ ಮತ್ತೊಬ್ಬರನ್ನು ಕೂಡಲೇ ನಿಯುಕ್ತಿಗೊಳಿಸಲಾಗುವುದು ಎಂದು ಆದೇಶವನ್ನು ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದ್ರಿ ವಿಡಿಯೋ ದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಕೋಮಿಗೆ ಸೇರಿದವರಾಗಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 32/2024 ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದಾಗಿ ವಿನಂತಿಸಲಾಗಿದೆ.