ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ರನ್ನು ಇಂದು ಎಸ್ಐಟಿ(SIT) ಕಸ್ಟಡಿಗೆ ಪಡೆದಿದೆ. ಅಕ್ಟೋಬರ್ 5ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಆದೇಶಿಸಿದ್ದಾರೆ.
ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ದ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮುನಿರತ್ನ ಅವರನ್ನು ಕಳೆದ ಶುಕ್ರವಾರ ಬೆಳಿಗ್ಗೆ ಬಂಧಿಸಲಾಗಿದ್ದು, ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದರ ಬೆನ್ನಲ್ಲೆ ಹೆಚ್ಚಿನ ತನಿಖೆಗಾಗಿ ಇಂದು ಅವರನ್ನು ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿದೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ.