



ಕೂಲಿ ಕಾರ್ಮಿಕನೊರ್ವ ಕುಡಿದ ಅಮಲಿನಲ್ಲಿ ದೇವಾಲಯದ ಸ್ವಿಚ್ ಬೋರ್ಡ್ ನೊಳಗೆ ಸೇರಿಕೊಂಡು ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮಲ್ಲಿನಾಥಪರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೆ.ಆರ್.ನಗರ ತಾಲೂಕಿನ ಬೆಳ್ಳುಳ್ಳಿ ಗ್ರಾಮದ ಬಳಿಯ ಬಸವಾಪುರದ ಮಹದೇವ(50) ಎಂದು ಗುರುತಿಸಲಾಗಿದೆ.
ಮಹದೇವನಿಗೆ ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಕುಡಿತದ ದಾಸನಾಗಿದ್ದ ಮಹದೇವ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈತನ ದುರಭ್ಯಾಸದಿಂದಾಗಿ ಪತ್ನಿ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಮಹದೇವ ಗಾರೆ ಕೆಲಸ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಬಿಳಿಕೆರೆ ಸುತ್ತಮುತ್ತ ಕೆಲಸ ಮಾಡುತ್ತಿದ್ದ ಈತ ಮಂಗಳವಾರ ರಾತ್ರಿ ಮಲ್ಲಿನಾಥಪುರದ ಬಳಿಯ ಕೆ.ಆರ್.ನಗರ ಜಂಕ್ಷನ್ ಬಳಿಯ ಬಸವೇಶ್ವರ ದೇವಾಲಯದ ಬಳಿ ಕುಡಿದ ಅಮಲಿನಲ್ಲಿ ಬಂದು ದೇವಾಲಯದ ಪಕ್ಕದ ಸ್ವಿಚ್ ಬೋರ್ಡ್ ಇರುವ ರೂನಿನೊಳಗೆ ಸೇರಿ ಬಾಗಿಲು ಹಾಕಿಕೊಂಡು ತಾನು ಧರಿಸಿದ್ದ ಲುಂಗಿಯಿಂದ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೈಸೂರು-ಹುಣಸೂರು ಹೆದ್ದಾರಿಯ ಕೆ.ಆರ್.ನಗರ ಜಂಕ್ಷನ್ ಬಳಿಯ ಬಸವೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು,
ಮುಂಜಾನೆ ಅರ್ಚಕರು ದೇವಾಲಯಕ್ಕೆ ಹೋಗಿ ಲೈಟ್‌ಗಳ ಸ್ವಿಚ್ ಹಾಕಲು ರೂಮ್ ಬಳಿ ಹೋದ ವೇಳೆ ಬಾಗಿಲು ಹಾಕಿದ್ದನ್ನು ಗಮನಿಸಿ ಕಿಟಕಿಯಿಂದ ನೋಡಿದ್ದು, ವ್ಯಕ್ತಿ ಇರುವುದನ್ನು ಕಂಡು ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರ್ಚಕರು ನೀಡಿದ ಮಾಹಿತಿ ಮೇರೆಗೆ ಬಾಗಿಲು ಒಡೆದು ನೋಡಿದಾಗ ವ್ಯಕ್ತಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಶವವನ್ನು ಕೆ.ಆರ್.ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರಿಗೆ ಹಸ್ತಾಂತರಿಸಲಾಯಿತು. ಈ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.