


ಪುತ್ತೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಮಾನಸಿಕ ಅಸ್ವಸ್ಥನೊಬ್ಬ ಯದ್ವಾತದ್ವ ಚಲಾಯಿಸಿದ ಘಟನೆ ಶನಿವಾರ ಸಂಜೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿದೆ.
ವಾಹನ ಚಲಾಯಿಸಿದ ವ್ಯಕ್ತಿಯನ್ನು ಕೇರಳದ ಕೊಟ್ಟಾಯಂ ನಿವಾಸಿ ಅರುಣ್ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಗೋವರ್ಧನ್ ಎಂಬವರು ಠಾಣೆಯಲ್ಲಿ ಠೇವಣಿ ಇಟ್ಟಿದ್ದ ಬಂದೂಕು ಹಿಂಪಡೆದು ಓಮ್ಮಿ ಕಾರಿನಲ್ಲಿಟ್ಟು ಮನೆಗೆ ಹೋಗಲು ಅನುವಾಗಿದ್ದರು. ಮಳೆ ಸುರಿದ ಕಾರಣ ಅವಸರದಲ್ಲಿ ಸಂಪ್ಯದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಕೀ ಅದರಲ್ಲೇ ಬಿಟ್ಟು ಪಕ್ಕದ ಅಂಗಡಿಯಿಂದ ಹಾಲು ಖರೀದಿಸಲು ಹೋಗಿದ್ದರು.
ಇದೇ ವೇಳೆ ಅರುಣ್ ಕಾರನ್ನೇರಿ ಚಲಾಯಿಸಿಕೊಂಡು ಕುಂಬ್ರದೆಡೆಗೆ ಹೋಗಿದ್ದಾನೆ. ಯದ್ವಾತದ್ವಾ ವಾಹನ ಚಲಾಯಿಸಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಈತನ ಅವಾಂತರ ಗಮನಿಸಿದ ಸಾರ್ವಜನಿಕರು ವಾಹನವನ್ನು ಅಡ್ಡಗಟ್ಟಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದೂಕು ಇರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಆತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.








