


ಸೂರತ್ನ ಖಾಸಗಿ ಶಾಲೆಯಲ್ಲಿ ಹೋಮ್ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕಿಯೊಬ್ಬರು 4 ವರ್ಷದ ಮಗುವಿನ ಬೆನ್ನಿಗೆ 35 ಬಾರಿ ಹೊಡೆದಿದ್ದಾರೆ. ಮಗುವಿನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದು, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ಸೂರತ್ನ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳಿಗೆ ಪಠ್ಯಕ್ಕೆ ಸಂಬಂಧಿಸಿದ ಮನೆ ಕೆಲಸ ನೀಡಲಾಗಿತ್ತು. ಒಂದು ಮಗು ಪಾಠ ಮುಗಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕಿ ಮಗುವಿನ ಬೆನ್ನ ಮೇಲೆ ಥಳಿಸುತ್ತಲೇ ಮನೆಕೆಲಸ ಹೇಳಿ ಕೊಟ್ಟಿದ್ದಾರೆ.
ಶಾಲೆಯಿಂದ ಮಗು ಮನೆಗೆ ಹಿಂತಿರುಗಿದ ಬಳಿಕ ಸಮವಸ್ತ್ರ ಬದಲಿಸುತ್ತಿದ್ದಾಗ ಮೈಮೇಲೆ ಬಾಸುಂಡೆಯ ಗುರುತು ಇರುವುದನ್ನು ಕಂಡು ತಾಯಿ ಗಾಬರಿಗೊಂಡಿದ್ದಾಳೆ. ಈ ಬಗ್ಗೆ ವಿಚಾರಿಸಿದಾಗ ಶಿಕ್ಷಕಿ ಥಳಿಸಿದ್ದಾಗಿ ಆ ಮಗು ತಿಳಿಸಿದೆ. ಕುಪಿತರಾದ ಪೋಷಕರು ತಕ್ಷಣವೇ ಶಾಲೆಗೆ ಬಂದು ಈ ಬಗ್ಗೆ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ಪೋಷಕರು ನೀಡಿದ ದೂರಿನ ಅನ್ವಯ ಶಾಲೆಯಲ್ಲಿನ ಸಿಟಿವಿಯನ್ನು ಪರಿಶೀಲಿಸಿದಾಗ, ಶಿಕ್ಷಕಿ ಪಾಠದ ವಿಷಯವಾಗಿ ಮಗುವನ್ನು 35 ಸಲ ಬಾರಿಸುತ್ತಿರುವುದು ಕಂಡುಬಂದಿದೆ. ಶಿಕ್ಷಕಿಯ ನಡೆಗೆ ಕ್ಷಮೆ ಕೋರಿದ ಆಡಳಿತ ಮಂಡಳಿ ಕ್ರಮದ ಭರವಸೆ ನೀಡಿದೆ. ಶಿಕ್ಷಕಿಯನ್ನು ವಿಚಾರಿಸಿದ ಬಳಿಕ ರಾಜೀನಾಮೆ ನೀಡಲು ಸೂಚಿಸಲಾಗಿದೆ.
ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಶಿಕ್ಷಕಿಯ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ಹೇಳಿಕೆಯ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.