Friday, May 3, 2024
spot_imgspot_img
spot_imgspot_img

ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರೇಯಸಿಯ ಕೊಂದ ಆರೋಪಿ ಅರೆಸ್ಟ್..!

- Advertisement -G L Acharya panikkar
- Advertisement -

ಜೀವನ್ ಬಿಮಾನಗರದ ಕೋಡಿಹಳ್ಳಿ ಬಳಿ ಇರುವ ಪ್ಯಾರಡೈಸ್ ಅಪಾರ್ಟ್ಮೆಂಟ್‌ನಲ್ಲಿ ಹೈದರಾಬಾದ್‌ ಮೂಲದ ಯುವತಿ ಆಕಾಂಕ್ಷ ವಿದ್ಯಾಸಾಗರ್‌ಳನ್ನು ಕೊಂದು ತಲೆ ಮರೆಸಿಕೊಂಡಿದ್ದ ಪ್ರಿಯಕರ ಬರೋಬ್ಬರಿ ಒಂದು ತಿಂಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.

ಅರ್ಪಿತ್ ಗುರಿಜಾಲ ಬಂಧಿತ ಆರೋಪಿ. ಹೈದರಾಬಾದ್ ಮೂಲದ ಆಕಾಂಕ್ಷ, ದೆಹಲಿ ಮೂಲದ ಅರ್ಪಿತ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಕಾರಣಕ್ಕಾಗಿ ಬೆಂಗಳೂರಲ್ಲಿ ಜತೆಯಾಗಿ ವಾಸವಾಗಿದ್ದ ಇವರು ಬೇರೆಯಾಗಬೇಕು ಎಂದು ನಿರ್ಧರಿಸಿದ್ದರು. ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಗಳು ನಡೆಯುತ್ತಲೇ ಇತ್ತು. ಕೊನೆಗೆ ಜೂನ್‌ 5ರ ರಾತ್ರಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿತ್ತು. ಬಳಿಕ ಆತ ತಲೆ ಮರೆಸಿಕೊಂಡಿದ್ದ.

ಪ್ರಕರಣ ದಾಖಲು ಮಾಡಿಕೊಂಡ ಬೆಂಗಳೂರು ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಕರ್ನಾಟಕದ ಮೂಲೆ ಮೂಲೆಗೂ ಸಂದೇಶವನ್ನು ಕಳಿಸಿದ್ದರು. ಆದರೆ, ಅರ್ಪಿತ್ ಸುಳಿವು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದಕ್ಕಾಗಿ ಸುಮಾರು 200 ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದರು. ಕೊನೆಗೂ ವಿಜಯವಾಡದಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.

ಕೊಲೆ ಮಾಡಿ ಯಾವುದೇ ಸುಳಿವು ನೀಡದೆ ತಲೆಮರೆಸಿಕೊಂಡಿದ್ದ ಅರ್ಪಿತ್, ಜಾಣತನ ಮೆರೆದಿದ್ದ. ಎಲ್ಲಿಯೂ ತಾನು ಸಿಕ್ಕಿಬೀಳದಂತೆ ನೋಡಿಕೊಂಡಿದ್ದ. ತಾನು ಎಲ್ಲಿ ಹೋಗುತ್ತಿದ್ದೇನೆ ಎಂಬುದೂ ಪೊಲೀಸರ ಗಮನಕ್ಕೆ ಬಾರದಂತೆ ಪ್ಲ್ಯಾನ್‌ ಮಾಡಿದ್ದ.

ರಾಜ್ಯದ ಹಲವು ಕಡೆ ಶೋಧಿಸಿದಾಗಲೂ ಆತ ಪತ್ತೆಯಾಗಿರಲಿಲ್ಲ. ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡವನ್ನು ಪೊಲೀಸರು ರಚನೆ ಮಾಡಿದ್ದರು. ದೆಹಲಿ, ಮುಂಬೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೊಲೀಸರು ಶೋಧ ಮಾಡಿದ್ದರು. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಅನ್ನು ಪೊಲೀಸರು ಹೊರಡಿಸಿದ್ದರು. ಬಳಿಕ ಪೊಲೀಸರಿಗೆ ಅರ್ಪಿತ್‌ ವಿಜಯವಾಡದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಾಚರಣೆಗೆ ಇಳಿದು ಆತನನ್ನು ಬಂಧಿಸಿದ್ದಾರೆ.

ಜೂನ್‌ 5ರಂದು ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು ಅರ್ಪಿತ್‌ ಸಿಟ್ಟಿನಲ್ಲಿ ಆಕಾಂಕ್ಷಳ ಕುತ್ತಿಗೆಗೆ ಬಟ್ಟೆ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದ. ಹತ್ಯೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ನೇಣು ಹಾಕಿಕೊಂಡಿರುವ ರೀತಿ ಬಿಂಬಿಸಲು ಯತ್ನಿಸಿದ್ದ. ಆದರೆ ಸಾಧ್ಯವಾಗದೇ ಮೃತದೇಹವನ್ನು ನೆಲದ ಮೇಲೆಯೇ ಬಿಟ್ಟು, ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿ ಆಗಿದ್ದ.

ರಾತ್ರಿ ಮತ್ತೊಬ್ಬ ರೂಮ್‌ ಮೇಟ್ ಕೆಲಸ ಮುಗಿಸಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮೊದಲು ಅನುಮಾನಾಸ್ಪದ ಸಾವು ಎಂದು ಪೊಲೀಸರು ಶಂಕಿಸಿದ್ದರು. ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬುದು ತಿಳಿದು ಬಂದಿತ್ತು. ಸದ್ಯ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅರ್ಪಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈಗ ವಿಜಯವಾಡದಲ್ಲಿ ಪತ್ತೆಯಾಗಿದ್ದಾನೆ.

- Advertisement -

Related news

error: Content is protected !!