ಬೆಂಗಳೂರು: ತೆರೆ ಮೇಲೆ ಮಿಂಚಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಟಿ ಮಾನ್ಯಾ ನಾಯ್ಡು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಅನಾರೋಗ್ಯ ಸಮಸ್ಯೆಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಮಾನ್ಯ ಹಂಚಿಕೊಂಡಿದ್ದಾರೆ.
ಮೂರು ವಾರಗಳ ಹಿಂದಿನಿಂದ ಬೆನ್ನುರಿ ಸಮಸ್ಯೆ ಆಯ್ತು, ನನ್ನ ಎಡ ಕಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವಂತಿತ್ತು. ನನಗೆ ಪಾರ್ಶ್ವವಾಯುವಾಗಿದೆ. ನನ್ನ ಬೆನ್ನುಮೂಳೆಗೆ ಇಂಜಕ್ಷನ್ ಮಾಡಲಾಯ್ತು. ನಾನು ತುಂಬ ಹೆದರಿದ್ದೇನು. ಕೊರೊನಾ ವೈರಸ್ ಇರೋದರಿಂದ ನಾನು ಏಕಾಂಗಿಯಾಗಿದ್ದೆ. ನಾನು ಬಹುಬೇಗ ಗುಣಮುಖಳಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.
ಕಳೆದ ಮೂರು ವಾರಗಳಿಂದ ನೋವಿನಿಂದಾಗಿ ನನಗೆ ಕೂರಲು ಆಗುತ್ತಿಲ್ಲ, ನಡೆಯಲು ಆಗುತ್ತಿಲ್ಲ, ಮಲಗಲಾಗುತ್ತಿಲ್ಲ, ನಿಂತುಕೊಳ್ಳಲಾಗುತ್ತಿಲ್ಲ, ಆದರೆ ನಾನು ಆದಷ್ಟು ಹುಷಾರಾಗಲು ಪ್ರಯತ್ನಪಡುತ್ತಿದ್ದೇನೆ. ಈ ಜೀವನ ನೀಡಿದ್ದಕ್ಕಾಗಿ ದೇವರಿಗೆ ಸದಾ ಋಣಿಯಾಗಿರುತ್ತೇನೆ. ನನ್ನ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದಗಳು. ಜೀವನ ಸುಲಭವಲ್ಲ ಅನ್ನೋದನ್ನು ನೆನಪಿಡಿ. ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ತನಗಾಗಿರುವ ನೋವನ್ನು ಮಾನ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾನು ಮತ್ತೆ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇನು. ಚೇತರಿಸಿಕೊಂಡ ನಂತರ ನೀವು ಮತ್ತೆ ಡಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ನಾನು ಗುಣಮುಖಳಾಗುತ್ತಿದ್ದೇನೆ ದೇವರಿಗೆ ಧನ್ಯವಾದವನ್ನು ಹೇಳುತ್ತೇನೆ. ಸಣ್ಣ ಸಮಸ್ಯೆಗಳು ನಿಮ್ಮನ್ನು ಬಲಪಡಿಸುತ್ತದೆ. ನಿಮ್ಮನ್ನು ನೀವು ಯಾವತ್ತು ಬಿಟ್ಟಕೊಡಬೇಡಿ. ನಾನು ತುಂಬಾ ನೊಂದಿದ್ದೇನೆ. ಅತ್ತಿದ್ದೇನೆ. ಆದರೆ ಗೆದ್ದು ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ.