ಚೆನ್ನೈ: ಹಿರಿಯ ನಟಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಇಂದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಖುಷ್ಬೂ ಅವರೊಂದಿಗೆ ಐಆರ್ ಎಸ್ ಅಧಿಕಾರಿ, ಖ್ಯಾತ ಯೂಟ್ಯೂಬರ್ ಒಬ್ಬರು ಕೂಡ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.ಈ ಮಾಹಿತಿಯನ್ನು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ ಅವರು ಭಾನುವಾರ ರಾತ್ರಿ ಕಾಂಗ್ರೆಸ್’ಗೆ ವಿದಾಯ ಹೇಳಿದ್ದು.

ಇಂದು ಬೆಳಗ್ಗೆ ಅವರು ಬಿಜೆಪಿ ಸೇರಲಿದ್ದಾರೆ. ಇಂದುದೆಹಲಿಗೆ ತೆರಳಲಿರುವ ಖುಷ್ಬೂ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತಿತರ ಹಿರಿಯ ನಾಯಕರನ್ನು ಭೇಟಿ ಮಾಡಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

2014ರ ಸೆಪ್ಟೆಂಬರ್’ನಲ್ಲಿ ಡಿಎಂಕೆ ಪಕ್ಷ ತೊರೆದಿದ್ದ ಖುಷ್ಬೂ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಕಳೆದೊಂದು ತಿಂಗಳಿನಿಂದ ಖುಷ್ಬೂ ಅವರು ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಊಹಾಪೋಹ ಎದ್ದಿದ್ದವು. ಕಳೆದ ವಾರ ಖುಷ್ಬೂ ಅವರು ಬಿಜೆಪಿ ಸೇರ್ಪಡೆ ವಿಚಾರವನ್ನು ತಳ್ಳಿ ಹಾಕಿದ್ದರು.
