Saturday, June 20, 2026
spot_imgspot_img
spot_imgspot_img

ಕೊಳ್ನಾಡು: ನಿರುಪಯುಕ್ತ ಕಿಂಡಿ ಅಣೆಕಟ್ಟಿನಿಂದ ಕೃಷಿ ಜಮೀನು ಸರ್ವನಾಶ..!

- Advertisement -
- Advertisement -

ಜಮೀನು ರಕ್ಷಣೆಗಾಗಿ ಎರಡು ವರ್ಷಗಳಿಂದ ವೃದ್ಧೆಯ ಹೋರಾಟ

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಒಂದೇ ವರ್ಷದಲ್ಲಿ ಕುಸಿದು ಹೊಳೆ ಬದಿಯ ಕೃಷಿ ಜಮೀನು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದೆ.

ತನ್ನ ಜಮೀನು ರಕ್ಷಿಸುವುದಕ್ಕಾಗಿ ಎಂಬತ್ತನಾಲ್ಕು ವರ್ಷದ ವೃದ್ಧೆ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೊಳ್ನಾಡು ಗ್ರಾಮದ ಪೀಲ್ಯಡ್ಕ ನಿವಾಸಿ ಶಕುಂತಳಾ ಶೇಖ(84)ತನ್ನ ಜಮೀನು ಉಳಿಸುವುದಕ್ಕಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುತ್ತಿರುವ ವೃದ್ಧೆ.

ಕೊಳ್ನಾಡು ಗ್ರಾಮದ ಸ.ನಂ.157/6ರ ಕೃಷಿ ಜಮೀನಿನ ಬದಿಯಲ್ಲಿ ಹಾದು ಹೋಗುವ ಹೊಳೆಗೆ ಹನ್ನೆರಡು ವರ್ಷಗಳ ಹಿಂದೆ ಅನಗತ್ಯವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದರು. ಅಣೆಕಟ್ಟು ನಿರ್ಮಿಸಿದ್ದ ಒಂದೇ ವರ್ಷದಲ್ಲಿ ಮಳೆಯ ಅಬ್ಬರಕ್ಕೆ ಅಣೆಕಟ್ಟಿನ ಒಂದು ಬದಿಯ ತಡೆಗೋಡೆ ಕುಸಿದು ಬಿದ್ದಿತ್ತು. ಆ ಬಳಿಕ ಅಣೆಕಟ್ಟು ನಿಷ್ಪ್ರಯೋಜಕವಾಗಿತ್ತೆಂದು ಸ್ಥಳೀಯ ಕೃಷಿಕರು ಹೇಳಿದ್ದಾರೆ. ಇದಾದ ಬಳಿಕ ಪ್ರತಿ ವರ್ಷವೂ ಮಳೆಗಾಲದ ನೀರಿನಲ್ಲಿ ಕೊಚ್ಚಿ ಹೋಗುವ ಮರಗಳು, ಕಸ-ಕಡ್ಡಿಗಳು ನಿರುಪಯುಕ್ತ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿ ಪಕ್ಕದ ಶಕುಂತಲಾ ಶೇಖ ಅವರ ಕೃಷಿ ಭೂಮಿಯನ್ನು ನುಂಗುತ್ತಿದೆ.

ನೀರಿನ ಸೆಳೆತಕ್ಕೆ ಈಗಾಗಲೇ ಶಕುಂತಲಾ ಶೇಖ ಅವರ ನಲುವತೈದು ಅಡಿಕೆ ಮರಗಳು, ನಾಲ್ಕು ತೆಂಗುಗಳು ಸೇರಿದಂತೆ ಕೃಷಿ ಜಮೀನು ಕೊಚ್ಚಿ ಹೋಗಿ ಸರ್ವನಾಶವಾಗುತ್ತಿದೆ. ಈ ಬಗ್ಗೆ ಎರಡು ವರ್ಷಗಳಿಂದ ಜಮೀನಿನ ಮಾಲಿಕರಾದ ವೃದ್ಧೆ ಶಕುಂತಳಾ ಅವರು ಗ್ರಾಮ ಪಂಚಾಯಿತಿನಿಂದ ಜಿಲ್ಲಾಧಿಕಾರಿ ತನಕ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಈವರೆಗೂ ನಿರುಪಯುಕ್ತ ಕಿಂಡಿ ಅಣೆಕಟ್ಟಿನ ಗೋಡೆಗಳನ್ನು ತೆರವು ಮಾಡುವುದಾಗಲೀ, ಕೃಷಿ ಜಮೀನಿಗೆ ತಡೆಗೋಡೆ ನಿರ್ಮಿಸಿ ಮಾಲಿಕರಿಗೆ ನಷ್ಟ ಪರಿಹಾರ ಕೊಡುವ ಕೆಲಸ ಮಾಡಿಲ್ಲ. ಇನ್ನಾದರೂ ಹೊಳೆ ನೀರು ಹರಿಯಲು ತೊಡಕುಂಟು ಮಾಡುವ ಕಿಂಡಿ ಅಣೆಕಟ್ಟಿನ ಗೋಡೆಗಳನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸುವ ಮೂಲಕ ನಷ್ಟ ಪರಿಹಾರ ನೀಡಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!