ರಾಜಸ್ಥಾನದಿಂದ ಕಲಬೆರಕೆ ಮಾಂಸ ಸಾಗಾಟ ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿಗೆ 5ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರತಿ ತಿಂಗಳ ಮೊದಲ ಭಾನುವಾರದಂದು ಠಾಣೆಗೆ ಹಾಜರಾಗಿ ಸಹಿ ಮಾಡಬೇಕು, ವಿಚಾರಣೆ ಮುಗಿಯುವವರೆಗೂ ದೇಶಬಿಟ್ಟು ಹೋಗಬಾರದು, ಬಿಡುಗಡೆ ಬಳಿಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಜೊತೆಗೆ ಮುಂದೆ ಇಂತಹದ್ದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ ಕೋರ್ಟ್. ಪುನೀತ್ ಕೆರೆಹಳ್ಳಿ ಪರ ವಕೀಲ ಪ್ರಕಾಶ್ ಶೆಟ್ಟಿ ವಾದಿಸಿದರು.
ರಾಜಸ್ಥಾನದಿಂದ ಬೆಂಗಳೂರಿಗೆ ತರಲಾಗಿದ್ದ ಮಾಂಸದ ಬಾಕ್ಸ್‌ಗಳಲ್ಲಿ ಕುರಿಮಾಂಸದೊಂದಿಗೆ ನಾಯಿ ಮಾಂಸ ಸೇರಿಸಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಮಾಂಸದ ಬಾಕ್ಸ್‌ಗಳನ್ನು ತಡೆಹಿಡಿದಿದ್ದ ಪುನೀತ್ ಕೆರೆಹಳ್ಳಿ ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.